‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ | ನಲ್ಲೂರು ಗ್ರಾಮದಲ್ಲಿ ಕಾರ್ಯಕ್ರಮ: ಅಹವಾಲು ಸ್ವೀಕಾರ

0
240

ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಹರಿಶೀ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮಕ್ಕೆ ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಡಗೂಡಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇವೆ. ಸ್ಥಳೀಯ ಜನರ ಕುಂದು ಕೊರತೆಗಳನ್ನು ಆಲಿಸಿ ಸ್ಪಂದಿಸುತ್ತಿದ್ದು. ಇಂದು ಹರೀಶಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದೇವೆ.

ಸಾಮಾನ್ಯವಾಗಿ ಬೆಳಿಗ್ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಕಡೆ ಹೋಗಿ ಸಂಜೆ ವೇಳೆಯಲ್ಲಿ ಗ್ರಾಮದ ರೈತರ ಜೊತೆ ಮಾತನಾಡುತ್ತಿದ್ದೆವು. ಆದರೆ ಈ ಬಾರಿ ಗ್ರಾಮಸ್ಥರ ಬೇಡಿಕೆಯಂತೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿ ನಂತರ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸುತ್ತೇವೆ. ಸರ್ವೆ ನಂಬರ್ 24 ರ ವಿಚಾರವನ್ನು ಕೂಡ ಪರಿಹರಿತ್ತೇವೆ.

ಜೊತೆಗೆ ಗ್ರಾಮದ ಕೆರೆ,ಅಂಗನವಾಡಿ, ಶಾಲೆ ಮತ್ತು ರಸ್ತೆಗಳ ಸಮಸ್ಯೆಗಳ ಬಗ್ಗೆ ಆಲಿಸಲಾಗಿದೆ. ಇದರೊಂದಿಗೆ ಪಕ್ಕದ ಗ್ರಾಮದ ಸಮಸ್ಯೆಯನ್ನು ಕೇಳಿ ನಾಳೆ ಭೆಟಿ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಅಹವಾಲು ಸ್ವೀಕಾರ :

ಗ್ರಾಮ ವಾಸ್ತವ್ಯ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾಗಳು, ಲೈಸೆನ್ಸ್ ಇಲ್ಲದೇ ಕದ್ದುಮುಚ್ಚಿ ಚಿಕ್ಕಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ದ ಶೀಘ್ರ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದರು.

ಗ್ರಾಮಸ್ಥರು ಸೊರಬದಿಂದ ಬನವಾಸಿ ಮಧ್ಯ ಓಡಾಡಲು ಪ್ರತಿ ದಿನ ಬಸ್ಸಿನ ಸಮಸ್ಯೆ ಇದೆ. ಬನವಾಸಿ ಬಾರ್ಡರ್ ಈಡೂರು ಕೆಂಚಿಕೊಪ್ಪ ಮತ್ತು ಇತರೆ ಹಳ್ಳಿಗಳಿಗೆ ಓಡಾಡಲು ಬಸ್ಸು ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಸಂಪರ್ಕ ರಸ್ತೆ ಮತ್ತು ಊರ ಒಳಗೆ ರಸ್ತೆ ಕಾಮಗಾರಿ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳು, ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಬಹುದು. ರಸ್ತೆ ಕುರಿತು ತಾಲ್ಲೂಕು ಕಾರ್ಯನಿರ್ವಹಕಾಧಿಕಾರಿ ಇವರು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಗೆ ಅವಕಾಶ ಮಾಡಿಕೊಡಬಹುದೆಂದು ತಿಳಿಸಿದರು.

ವಿದ್ಯುತ್ ಲೈನ್ ಬದಲಾವಣೆ ಮಾಡಿ ಕೊಡಬೇಕು ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಅಂಗನವಾಡಿ ಅಭಿವೃದ್ದಿ ಮತ್ತು ಶಾಲಾಭಿವೃದ್ದಿ ಕುರಿತು ಚರ್ಚಿಸಿದ ವೇಳೆ ಗ್ರಾಮಸ್ಥರು ಶಾಲೆಗೆ ನಿವೇಶನ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.

ಸೊರಬ ಸಿವಿಲ್ ಕೋರ್ಟ್‍ನಲ್ಲಿ ಕುಟುಂಬ ವ್ಯಾಜ್ಯವೊಂದರ ತೀರ್ಪಿನನ್ವಯ ಪಾರ್ಟಿಷನ್ ಮಾಡುವ ಸಂಬಂಧ ಕೇಸ್ ನಂಬರ್ ತೆಗೆದುಕೊಳ್ಳಲಾಯಿತು. ಹಾಗೂ ದಾನಪತ್ರ ಮಾಡುವ ಕುರಿತು ಚರ್ಚೆ ವೇಳೆ, ದಾನಪತ್ರವನ್ನು ಮಾಡಲು ರಕ್ತ ಸಂಬಂಧ ಇರಬೇಕು. ಅನ್ಯವ್ಯಕ್ತಿಯಿಂದ ಭೂಮಿ ತೆಗೆದುಕೊಳ್ಳಲು ಕ್ರಯ ಪತ್ರ ಮಾಡಬಹುದು ಎಂದು ದಾನಪತ್ರದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಲಾಯಿತು.

ಹಳ್ಳ ಅಗಲೀಕರಣದ ಕುರಿತ ಮನವಿಗೆ, ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಸ್ಟೋನ್ ಪಿಚಿಂಗ್ ಕೆಲಸ ಮಾಡಬಹುದು ಎಂದರು. ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಗ್ರಾಮಸ್ಥರು ಡಿಸಿ ರವರ ಗಮನ ಸೆಳೆದಾಗ, ಬಿಇಓ ರವರ ಜೊತೆ ಈ ಸಮಸ್ಯೆ ಕುರಿತು ಚರ್ಚಿಸಿ, ಅತಿಥಿ ಶಿಕ್ಷಕರು ಮತ್ತು ರೆಗ್ಯುಲರ್ ಶಿಕ್ಷಕರನ್ನು ನಿಯಮಾನುಸಾರ ನಿಯೋಜಿಸುವ ಕುರಿತು ಬಿಇಓ ರವರಿಗೆ ಸೂಚನೆ ನೀಡಿದರು.

ಸಂಧ್ಯಾ ಸುರಕ್ಷಾ ಸೌಲಭ್ಯವನ್ನು ನಾಡ ಕಚೇರಿಯಿಂದ ನೀಡಲು ವಿಳಂಬವಾಗುತ್ತಿರುವ ಕುರಿತು ಗಮನ ಸೆಳೆದಾಗ ಡಿಸಿ ಯವರು ಅತೀ ಜರೂರಾಗಿ ಸ್ಥಳೀಯರಿಗೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.

ಕೆಲ ಗ್ರಾಮಸ್ಥರು ಸೀಮೆಎಣ್ಣೆ ಬೇಕೆಂದು, ರೇಷನ್ ಜೊತೆ ಸೀಮೆಎಣ್ಣೆ ಸಹ ನೀಡಲು ಡೀಲರ್ಸ್‍ಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಡಿಸಿಯವರು ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಸೀಮೆಎಣ್ಣೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ, ಅನುಮೋದನೆ ಸಿಕ್ಕ ಕೂಡಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡು ಕಡಿತಲೆ, ಅಗ್ಗಳ, ಮನೆ ಬಳಕೆಗೆ ಕಟ್ಟಿಗೆ ಕಡಿತ ಕುರಿತು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗಿನ ವಿವಾದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿ, ಜಿಲ್ಲಾಧಿಕಾರಿಗಳು ಡಿಸಿಎಫ್‍ರವರು ಈ ಸಮಸ್ಯೆ ಕುರಿತು ತನಿಖೆ ನಡೆಸುವಂತೆ ಆದೇಶಿಸಿದರು.

ಸದ್ಯದ ರೂಟ್ ವ್ಯವಸ್ಥೆಯಿಂದ ಹಾಲು ಹಾಕುವ ರೈತರಿಗೆ ನಷ್ಟ ಆಗುತ್ತಿದ್ದು ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು, ಜಿಲ್ಲಾಧಿಕಾರಿಗಳು, ಹೊಸ ರೂಟ್ ವ್ಯವಸ್ಥೆ ಮಾಡಿ ರೈತರಿಗೆ ಆಗುವ ನಷ್ಟವನ್ನು ಸರಿಪಡಿಸಬೇಕೆಂದು ಕೆಎಂಎಫ್ ಎಂ.ಡಿ ರವರಿಗೆ ಸೂಚನೆ ನೀಡಿದರು.

ಗ್ರಾಮಸ್ಥರು ಮುಜರಾಯಿಗೆ ಸೇರಿದ ಶಿವನ ದೇವಸ್ಥಾನದ ಜೀರ್ಣೋದ್ದಾರ ಮಾಡುವಂತೆ ಮನವಿ ಮಾಡಿದರು. ಕೆರೆ ಹೂಳು ತೆಗೆಯುವುದು, ಶಾಲೆ ಶೌಚಾಲಯ, ಕಟ್ಟಡಗಳ ದುರಸ್ತೆಗೆ ಮನವಿ ಮಾಡಿದರು.

ಹಾಗೂ 11ಇ ಸ್ಕೆಚ್ ಕುರಿತು ಜಿಲ್ಲಾಧಿಕಾರಿಗಳು ಮಾತನಾಡಿ, ತಂದೆ ಅಥವಾ ತಾಯಿ ಬದುಕಿದ್ದರೆ ಅವರ ಒಪ್ಪಿಗೆ ಇದ್ದರೆ ಖಾತೆ ಬದಲಾವಣೆ ಮಾಡಲು, ವಿಭಾಗ ಪತ್ರ ಮಾಡಸಲು 11ಇ ಸ್ಕೆಚ್‍ಗೆ ಅರ್ಜಿ ಸಲ್ಲಿಸಬಹುದೆಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here