ಶಿವಮೊಗ್ಗ: ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆ ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 2021-21 ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕಿನ ಕೋಡೂರಿನ ಕೊಡದಿ ಮಹಿಳಾ ಒಕ್ಕೂಟವು ಅತ್ಯುತ್ತಮ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟ ಎಂಬ ಪ್ರಶಸ್ತಿಯನ್ನು ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಗ್ರಾಮ-ಗ್ರಾಮಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿ ಮಹಿಳಾ ಸಬಲೀಕರಣ, ಮಹಿಳಾ ಅರ್ಥಿಕ ದೃಢತೆ, ಗ್ರಾಮಗಳ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತೆ, ಗ್ರಾಮಗಳ ಬಗ್ಗೆ ಹೆಚ್ಚಿನ ಮುತುವರ್ಜಿ ಇನ್ನಿತರ ಸಮಸ್ಯೆಗಳ ಬಗ್ಗೆ ಜನರೊಂದಿಗೆ ಸ್ಪಂದಿಸಿ ಉತ್ತಮ ಕೆಲಸ ನಿರ್ವಹಿಸಿದ ಕೋಡೂರು ಗ್ರಾಮದ ಕೊಡದಿ ಸಂಜೀವಿನಿ ಒಕ್ಕೂಟ ಜಿಲ್ಲಾ ಮಟ್ಟದ ಸಂಜೀವಿನಿ ಪ್ರಶಸ್ತಿ ಪಡೆದುಕೊಂಡಿದೆ.
ಈ ಒಕ್ಕೂಟದ ಸಾಧನೆಗೆ ಪ್ರಶಸ್ತಿ ಪತ್ರ ಹಾಗೂ 1.5 ಲಕ್ಷ ರೂ. ನಗದು ಬಹುಮಾನವನ್ನು ಜಿಪಂ ಸಿಇಒ ಎಂ.ಎಲ್ ವೈಶಾಲಿ ಅವರು ಸಂಘದ ಸದಸ್ಯರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಸೇವ ಪ್ರಾಧಿಕಾರಿಗಳ ಅಧಿಕಾರಿ ಸರಸ್ವತಿ, ವರ್ಷದಲ್ಲಿ ಒಂದು ದಿನ ಮಹಿಳೆಯರ ದಿನಾಚರಣೆ ಸರಿಯಲ್ಲ. ಹೆಣ್ಣನ್ನ ಬಿಟ್ಟು ಗಂಡಿಲ್ಲ, ಗಂಡನ್ನ ಬಿಟ್ಟು ಹೆಣ್ಣಿಲ್ಲ. ಹಾಗಾಗಿ ಮಹಿಳೆಯಿಲ್ಲದ ಕುಟುಂಬ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದರು.
ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆ ಇಂದು ದೇಶವನ್ನ ಆಡಳಿತ ನಡೆಸಿದ್ದಾಳೆ. ಮಕ್ಕಳಿಗೆ ಉತ್ತಮ ಪರಿಸರ ನೀಡಲು ತಾಯಿಯಂದಿರ ಕೊಡುಗೆ ಅಪಾರ. ಮಗು ಸರ್ವತೋಮುಖವಾಗಿ ಬೆಳೆಯಲು ತಾಯಿಯ ಪಾತ್ರ ಅಮೂಲ್ಯವೆಂದರು.
ಪುರುಷರ ಸಹಾಯವೂ ಸಹ ಮಹಿಳೆಯರ ಬೆಳವಣಿಗೆಗೆ ಅನುಕೂಲವಾಗಿರಬೇಕು. ಮಹಿಳೆಯರ ರಕ್ಷಣೆಗೆ ನೂರಾರು ಕಾನೂನುಗಳಿವೆ. ರಕ್ಷಣೆಗೆ ಇರುವ ಕಾನೂನು ದುರುಪಯೋಗವಾಗಬಾರದು ಎಂದು ಕರೆ ನೀಡಿದರು.
ಮಹಿಳೆಯರಿಗೆ ಅನ್ಯಾಯವಾದರೆ ಕೆಳಮಟ್ಟದ ನ್ಯಾಯಾಲಯದಿಂದ ಸರ್ವೋಚ್ಛ ನ್ಯಾಯಾಲಯದವರೆಗೆ ಉಚಿತ ಕಾನೂನು ಸೇವೆ ದೊರೆಯುತ್ತದೆ. ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯನ್ನ ಮೆಟ್ಟಿಲೇರುವ ಮುನ್ನ ಎಲ್ಲಾ ರೀತಿಯ ಯೋಚನೆ ಮಾಡಿ ಮುಂದುವರೆಯೋಣವೆಂದರು.
ಅಭಿನಂದನೆ:
ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ಕೊಡದಿ ಒಕ್ಕೂಟದ ಸದಸ್ಯರು ಸಂಜೀವಿನಿ ಪ್ರಶಸ್ತಿ ಪಡೆದುಕೊಂಡಿದ್ದು ನಮ್ಮ ಗ್ರಾಮಕ್ಕೆ ತಾಲ್ಲೂಕಿಗೆ ಹೆಮ್ಮೆ ತಂದಿದೆ. ಇವರು ಇನ್ನೂ ಹೆಚ್ಚಿನ ಸೇವೆ ಮಾಡಿ ನಮ್ಮ ಗ್ರಾಮದ ಮಹಿಳೆಯರ ಉದ್ಧಾರಕ್ಕೆ ಸಹಕರಿಸಲಿ ಹಾಗೂ ಇನ್ನೂ ಹೆಚ್ಚಿನ ಸೇವೆ ಮಾಡಿ ಇನ್ನೂ ಹೆಚ್ಚಿನ ಪ್ರಶಸ್ತಿ ಪಡೆಯಲಿ ಎಂದು ಹೊಸನಗರ ತಾಪಂ ಸದಸ್ಯರಾದ ಬಿ.ಜಿ ಚಂದ್ರಮೌಳಿಗೌಡ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.