ಜಿಲ್ಲೆಗೆ ಮುಖ್ಯಮಂತ್ರಿಗಳ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಲು ಅಧಿಕಾರಿಗಳಿಗೆ ಡಿಸಿ ಕೆ.ಎನ್ ರಮೇಶ್ ಸೂಚನೆ

0
145

ಚಿಕ್ಕಮಗಳೂರು: ಇದೇ 18ನೇ ತಾರೀಖು ಬುಧವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಚಿಕ್ಕಮಗಳೂರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಭದ್ರತೆ, ರಕ್ಷಣಾ ವ್ಯವಸ್ಥೆ ಹಾಗೂ ಪ್ರವಾಸ ಕಾಲದಲ್ಲಿ ಸೂಕ್ತ ಕಾನೂನು ಸುವ್ಯವಸ್ಥೆ ಮತ್ತು ಶಿಸ್ತುಪಾಲನಾ ಕ್ರಮಗಳನ್ನು ಪಾಲಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.

ಮುಖ್ಯಮಂತ್ರಿಗಳ ಭೇಟಿ ನಿಮಿತ್ತ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 18ರಂದು ಬುಧವಾರ ಬೆಳಿಗ್ಗೆ 11:30ಕ್ಕೆ ಚಿಕ್ಕಮಗಳೂರಿಗೆ ಆಗಮಿಸುವ ಮುಖ್ಯಮಂತ್ರಿಗಳು, ಮಧ್ಯಾಹ್ನ 12:30ಕ್ಕೆ ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನದ ನಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಹಾಗೂ ಬಸವ ತತ್ವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು ಸಾಂಕೇತಿಕವಾಗಿ ಮುಖ್ಯಮಂತ್ರಿ ಉದ್ಘಾಟಿಸಲಿದ್ದು, ಈ ಸಂಬಂಧ ಎಲ್ಲಾ ಇಲಾಖೆಗಳು ತಮ್ಮ ಯೋಜನೆಗಳ ವರದಿ, ಹಿನ್ನೆಲೆ, ಅನುದಾನ, ವೆಚ್ಚ, ಫಲಾನುಭವಿಗಳು, ಸಮಸ್ಯೆಗಳು ಮುಂತಾದ ಸಂಪೂರ್ಣ ಮಾಹಿತಿಗಳನ್ನು ಒಟ್ಟುಗೂಡಿಸಿ ಸಂಕ್ಷಿಪ್ತವಾಗಿ ವರದಿ ಸಲ್ಲಿಸಲು ಅವರು ಸೂಚಿಸಿದರು.

ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳ ಸ್ಥಳಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗದಂತೆ ನಿಗಾವಹಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಿಂದ 9.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅರಣ್ಯ ಭವನದ ಶಂಕು ಸ್ಥಾಪನೆ, 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕಛೇರಿ ಸಂಕೀರ್ಣದ ಶಂಕುಸ್ಥಾಪನೆ, ನೂತನ ಪ್ರವಾಸಿ ಮಂದಿರ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಗಳನ್ನು ಅವರು ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಖರಾಯಪಟ್ಟಣದಲ್ಲಿ ನಿರ್ಮಿಸಲಾಗಿರುವ ಐಟಿಐ ಕಾಲೇಜನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿಗಳು, ಕಲ್ಯಾಣನಗರ ಬಳಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಹಿಳಾ ಕ್ರೀಡಾ ವಿದ್ಯಾರ್ಥಿನಿಲಯ, 3.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಫೂಟ್‌ಬಾಲ್ ಅಂಕಣ, ಶೃಂಗೇರಿಯಲ್ಲಿ 24.22 ಕೋಟಿ ರೂ. ಹಾಗೂ ಕಳಸದಲ್ಲಿ 22.67 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ. 4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದ ಉದ್ಘಾಟನೆ , ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಲಿರುವ ಅವರು ಸರ್ಕಾರದಿಂದ ಮಂಜೂರಾಗಿರುವ ಒಟ್ಟು 14.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 4 ಸೇತುವೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದು.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 16 ರಸ್ತೆಗಳಿಗೆ ಶಂಕು ಸ್ಥಾಪನೆ. ನರೇಗಾ ಯೋಜನೆಯಡಿ ಸುಮಾರು 170 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಲೆ, ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳಿಗೆ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ಹಿರಿಯ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಹಾಗೂ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here