ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿ ಮಾಡಲು ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

0
391

ಚಿಕ್ಕಮಗಳೂರು: ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿ ಮಾಡುವುದರ ಜೊತೆಗೆ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಛೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೇ-31 ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಕೋಟ್ಟಾ-2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಘೋಷಿಸುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.

ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲಿ ತಂಬಾಕು ತನಿಖಾ ದಳದಿಂದ ವಾರದಲ್ಲಿ ಒಂದು ದಿನ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಮಳಿಗೆ, ಅಂಗಡಿಗಳ ಮೇಲೆ ಕೋಟ್ಟಾ ದಾಳಿ ಮಾಡುವುದರಿಂದ ತಂಬಾಕು ಉತ್ಪನ್ನಗಳ ನಿಯಂತ್ರಣವನ್ನು ಮಾಡಬಹುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದು, 18 ವರ್ಷ ವಯೋಮಿತಿಗಿಂತ ಕಡಿಮೆ ಇರುವ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳುವುದು, ಶಾಲಾ, ಕಾಲೇಜು, ಹಾಗೂ ಸರ್ಕಾರಿ ಕಛೇರಿಗಳ ವಲಯದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವಂತಹ ಅಂಗಡಿಗಳಿಗೆ ದಂಡ ವಿಧಿಸಿ ತಂಬಾಕು ನಿಷೇಧಿಸುವಂತೆ. ಎಲ್ಲಾ ಸರ್ಕಾರಿ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಪ್ರದರ್ಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಂಬಾಕು ಸೇವನೆಯಿಂದ ಸಾರ್ವಜನಿಕರು ಹಲವಾರು ರೋಗಗಳಿಗೆ ತುತ್ತಾಗಿದು ಜೊತೆಗೆ ರೇಬಿಸ್, ಟಿ.ಬಿ, ಹೆಚ್.ಐ.ವಿ.ಯಂತಹ ಕಾಯಿಲೆಗಳನ್ನು ತಡೆಗಟ್ಟಲು ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿರ್ಮೂಲನ ಅಧಿಕಾರಿ ಬಾಲಕೃಷ್ಣ.ಟಿ.ಪಿ ಮಾಹಿತಿ ನೀಡಿದರು.

ಕ್ಷಯ ರೋಗದಿಂದ ಬಳಲುತ್ತಿರುವವರು 6 ರಿಂದ 8 ತಿಂಗಳವರೆಗೆ ಸರ್ಕಾರದಿಂದ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕ್ಷಯರೋಗ ಪೀಡಿತರು ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶದ ಆಹಾರವನ್ನು ಸೇವಿಸಬೇಕು. 2025 ರೊಳಗೆ ಭಾರತವನ್ನು ಕ್ಷಯಮುಕ್ತ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

18 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟ ಹೆಚ್.ಐ.ವಿ ಸೋಂಕಿತರು ಪ್ರತಿ ತಿಂಗಳು ಚಿಕಿತ್ಸೆಯನ್ನು ಪಡೆಯಬೇಕು. ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ 2236 ಜನರು ಹೆಚ್.ಐ.ವಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ|| ಭರತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಉಮೇಶ್, ಜಿಲ್ಲಾ ತಂಬಾಕು ನಿಯಂತ್ರಣಾ ಕಾರ್ಯಕ್ರಮಾಧಿಕಾರಿ ಡಾ|| ಹೆಚ್.ಕೆ.ಮಂಜುನಾಥ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ|| ಹರೀಶ್ ಬಾಬು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದಿನೇಶ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here