ಜೂ.15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ | ಕುವೆಂಪು ತೀರ್ಥಹಳ್ಳಿಯವರೆಂಬುದೇ ಆರಗ ಜ್ಞಾನೇಂದ್ರ ರವರಿಗೆ ಗೊತ್ತಿಲ್ಲ ; ಕಿಮ್ಮನೆ ರತ್ನಾಕರ್ ವಾಗ್ದಾಳಿ

0
255

ಶಿವಮೊಗ್ಗ: ಜೂ.15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಿಕ್ಷಣ ಸಚಿವ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಜೂ.15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಯಲ್ಲಿದ್ದು, ಪಠ್ಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ಪಠ್ಯವನ್ನೇ ಮುಂದುವರಿಸಬೇಕು. ಈ ಪಾದಯಾತ್ರೆ ಪಕ್ಷಾತೀತವಾಗಿ ನಡೆಯಲಿದ್ದು ಬಿಜೆಪಿಯವರೂ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದರು.

ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಕುಂ.ವೀರಭದ್ರಪ್ಪ, ಡಾ.ರಾಜೇಂದ್ರ ಚನ್ನಿ ಸೇರಿದಂತೆ ರಾಜ್ಯದ ವಿವಿಧ ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಡಿನ ಎಲ್ಲಾ ಕ್ಷೇತ್ರಗಳ ಪ್ರಮುಖರನ್ನು ಪಾದಯಾತ್ರೆಗೆ ಆಹ್ವಾನಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಕವಿಶೈಲದಿಂದ ಆರಂಭಗೊಂಡು 11 ಗಂಟೆಗೆ ತೀರ್ಥಹಳ್ಳಿ ತಲುಪಲಿದೆ. ಸಾಕಷ್ಟು ಸಮಯಾವಕಾಶ ಪಡೆದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಬರಗೂರು ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಆದರೀಗ ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ. ಸಮಿತಿ ರದ್ದು ಮಾಡಿದರೆ ಸಾಲದು, ಪಠ್ಯಪುಸ್ತಕವನ್ನೇ ರದ್ದು ಮಾಡಬೇಕು ಎಂದರು.

ಪಠ್ಯ ಪರಿಷ್ಕರಣೆಯಿಂದ ಕುವೆಂಪು, ಅಂಬೇಡ್ಕರ್ ಸಹಿತ ಹಲವಾರು ಗಣ್ಯರನ್ನು ಅವಮಾನ ಮಾಡಲಾಗಿದೆ. ಅನೇಕ ಸಮಾಜಗಳಿಗೆ ಅನ್ಯಾಯವಾಗಿದೆ. ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕಾರ್ಯ ಸರಕಾರದಿಂದ ನಡೆದಿದೆ ಎಂದರು.

ಆರಗ ವಿರುದ್ಧ ವಾಗ್ದಾಳಿ :

ಕುವೆಂಪು ಬಗ್ಗೆ ಗೃಹಸ ಚಿವರಿಗೆ ಗೊತ್ತೇ ಇಲ್ಲ. ಕುವೆಂಪು ತೀರ್ಥಹಳ್ಳಿಯವರೆಂಬುದೇ ಆರಗ ಜ್ಞಾನೇಂದ್ರ ಅವರಿಗೆ ಗೊತ್ತಿಲ್ಲ. ಗೃಹ ಸಚಿವರು ಚಿಂತನಗಂಗಾ ಮಾತ್ರ ಓದಿದ್ದು. ತೀರ್ಥಹಳ್ಳಿಯಲ್ಲಿ ಆಗುತ್ತಿರುವ ಎಲ್ಲಾ ಅಹಿತಕರ ಘಟನೆಗಳಿಗೆ ಜ್ಞಾನೇಂದ್ರ ಕಾರಣ. 1994 ರಲ್ಲಿ ಕುವೆಂಪು ಅವರು ದೈವಾಧೀನರಾದಾಗ ಜ್ಞಾನೇಂದ್ರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಕುವೆಂಪು ಬಗ್ಗೆ ಅವರಿಗೆ ಬೆಲೆಯೂ ಆಗ ನೀಡಿರಲಿಲ್ಲ ಎಂದು ಗೃಹಸಚಿವರ ವಿರುದ್ಧ ಕಿಮ್ಮನೆ ವಾಗ್ದಾಳಿ ನಡೆಸಿದರು.

ಇನ್ನೂ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಗೆ ಇಡಿ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಮನೆ, ಕೇಂದ್ರ ಸರ್ಕಾರ ದುರುದ್ದೇಶ ಪೂರ್ವಕವಾಗಿ ಹೀಗೆ ನಡೆದುಕೊಳ್ಳುತ್ತಿದೆ. ಇದರ ವಿರುದ್ಧ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here