ಡಾ. ಎಂ.ಎ. ಜಯಚಂದ್ರರವರಿಗೆ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

0
341

ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಹೊಂಬುಜ ಜೈನ ಮಠದ ವತಿಯಿಂದ ನೀಡುವ 2021ನೇ ಸಾಲಿನ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ನಿವೃತ್ತ ಪ್ರಾಂಶುಪಾಲರು, ಜಾನಪದ ಸಾಹಿತಿ, ಜೈನಾಗಮ ವಿದ್ವಾಂಸರಾದ ಬೆಂಗಳೂರಿನ ಡಾ. ಎಂ.ಎ. ಜಯಚಂದ್ರರವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ.

ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ 02.04.2021ನೇ ಶುಕ್ರವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಇವರು 1944ರ ಜನವರಿ 30ರಂದು ಮಂಡ್ಯದಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣವನ್ನು ಮಂಡ್ಯದಲ್ಲಿ ಪಡೆದ ಇವರು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಮೈಸೂರಿನ ವಿಶ್ವವಿದ್ಯಾಲನಿಲಯದಿಂದ ಎಂ.ಎ ಪದವಿ ಪಡೆದ ಇವರು ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ ಎಂಬ ಮಹಾಪ್ರಬಂಧ ಮಂಡಿಸಿ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿ ಪಡೆದರು.

ಇವರು ಬೋಧಕರಾಗಿ ಮಂಡ್ಯ, ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಮುಂತಾದೆಡೆಯ ಕಾಲೇಜುಗಳಲ್ಲಿ ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಹಿರಿಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 115 ಜಾನಪದ ಕಿರುಕತೆಗಳು, ಫೋಕ್‌ಲೋಕ್, ಸಂಸಾರಿ ಹೆಚ್ಚೋ ಸನ್ಯಾಸಿ ಹೆಚ್ಚೋ, ಪಡಸಾಲೆಯ ಪವಾಡಗಳು, ಜಾನಪದ ನೀಳ್ಗತೆಗಳು, ಬುದ್ಧಿವಂತಿಕೆಯ ಕಥೆಗಳು ಇವರ ಜಾನಪದ ಕೃತಿಗಳಾಗಿವೆ.

ಏಲಾಚಾರ್ಯ ಮುನಿಶ್ರೀ ವಿದ್ಯಾನಂದರು, ಆಚಾರ್ಯ ಶ್ರೀ ಕುಂದಕುಂದರು, ಆ.ನೇ. ಉಪಾಧ್ಯೆ, ಅತಿಮಬ್ಬೆ, ಭಗವಾನ್ ಮಹಾವೀರ, ಜೀವನ ಚರಿತ್ರೆಗಳು, ತಿಲೋಯಪಣ್ಣತಿ ಗ್ರಂಥದ ಸಂಪಾಧನೆ, ಕವಿತೆ-ವಚನ ಕೃತಿಗಳು, ದಾರ್ಶನಿಕ ಕಥಾಸಂಗ್ರಹಗಳು ಹಲವಾರು ಸಂಪಾದಿತ ಕೃತಿಗಳು, ಪ್ರಾಕೃತ ಸಾಹಿತ್ಯ ಕೃತಿಗಳು ಮುಂತಾದ 59ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಧವಲೇತರ ಪ್ರಾಕೃತ ಗ್ರಂಥಗಳ ಸಂಪಾಧನಾ ಕಾರ್ಯದಲ್ಲಿ ತೊಡಗಿರುತ್ತಾರೆ. ಹೊಂಬುಜದ ಸಿದ್ಧಾಂತಕೀರ್ತಿ ಪ್ರಕಾಶನ ಗ್ರಂಥಮಾಲೆಯ ಸಂಪಾದಕ ಮಂಡಳಿಯಲ್ಲಿಯೂ ಅನೇಕ ವರ್ಷ ಸೇವೆ ಸಲ್ಲಿಸಿರುತ್ತಾರೆ.

ಹೊಂಬುಜ ಜೈನ ಮಠದಿಂದ ನೀಡುವ ಸಿದ್ದಾಂತ ಕೀರ್ತಿ ಪ್ರಶಸ್ತಿಯು ರೂ. 51,000 ಗಳ ನಗದು ಮತ್ತು ಅಂಗವಸ್ತ್ರ ಸಹಿತ ನೀಡಿ ಗೌರವಿಸಲಾವುದು. ಇದುವರೆಗೂ ಅನೇಕ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಸುಮಾರು 4 ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here