ಡಾ. ಬಾಬು ಜಗಜೀವನರಾಮ್ ರವರ 114ನೇ ಜಯಂತಿ | ಭಾರತ ದೇಶದ ಉತ್ಕೃಷ್ಟ ರಾಷ್ಟ್ರಭಕ್ತ ಬಾಬು ಜಗಜೀವನ ರಾಮ್: ಕೆ.ಎಸ್. ಈಶ್ವರಪ್ಪ

0
267

ಶಿವಮೊಗ್ಗ : “ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೇ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ ರಾಮ್‍ರವರ 114ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ, ಭಾರತ ದೇಶ ಕಂಡ ಉತ್ಕೃಷ್ಟ ರಾಷ್ಟ್ರಭಕ್ತ ಇವರು. ಇವರ ಜೀವಿತಾವಧಿಯ ಸಮಯದಲ್ಲಿ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಅಲೆಯನ್ನ ಎಬ್ಬಿಸಿದವರು. ಇವರು ಗ್ರಾಮೀಣಾಭಿವೃದ್ಧಿಗೆ ಮತ್ತು ಕೃಷಿ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಇಂತಹ ಧೀಮಂತ ನಾಯಕರ ಆದರ್ಶಗಳನ್ನು ರಾಜಕಾರಣಿ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದ್ದೇ ಆದರೆ ಜೀವನ ಸಾರ್ಥಕವಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರ, ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ|| ಮೈಲಹಳ್ಳಿ ರೇವಣ್ಣ ಇವರು ಬಾಬು ಜಗಜೀವನ ರಾಮ್‍ರ ವಿದ್ಯಾಭ್ಯಾಸ. ಬಾಲ್ಯ ಜೀವನ ಹಾಗೂ ರಾಜಕೀಯ ಜೀವನ ಒಟ್ಟಾರೆಯಾಗಿ ಇವರ ಜೀವನ ಚರಿತ್ರೆಯನ್ನು ಕುರಿತಾದ ವಿಚಾರಗಳನ್ನು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಎಸ್. ಎಸ್. ಎಲ್. ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಎಸ್. ಸಿ ಮತ್ತು ಎಸ್. ಟಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಶಿವಮೊಗ್ಗ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಗೀತಾ ಜಯಶೇಖರ್ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here