ರಿಪ್ಪನ್ಪೇಟೆ: ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಎಂ.ಬಿ.ಚನ್ನವೀರಪ್ಪನವರು ಅತ್ಯತ್ತಮವಾಗಿ ಅಡಳಿತ ನಡೆಸುತ್ತಿದ್ದರೂ ಕೂಡಾ ಬ್ಯಾಂಕ್ ನಿರ್ದೇಶಕರಲ್ಲಿ ಒಬ್ಬರಾದ ದುಗ್ಗಪ್ಪಗೌಡರು ಅಡಳಿತ ವ್ಯವಸ್ಥೆಯ ವಿರುದ್ದ ಇಲ್ಲ-ಸಲ್ಲದ ಆರೋಪ ಮಾಡುವುದರೊಂದಿಗೆ ಬ್ಯಾಂಕ್ ಅನ್ನು ಅಸ್ಥಿರಗೊಳಿಸುವ ಹುನ್ನಾರದ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರದು ಎಂದು ಹರತಾಳು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಹರತಾಳು ನಾಗರಾಜ್ ಮತ್ತು ಕ್ಯಾಂಪ್ಕೋ ನಿರ್ದೇಶಕ ಹೆಚ್.ಎಂ.ರಾಘವೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಇಂದು ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಬ್ಯಾಂಕ್ ಯಾವೊಬ್ಬ ವ್ಯಕ್ತಿಯದಲ್ಲ ಇದು ರೈತರ ಬ್ಯಾಂಕ್ ಅದನ್ನು ಉಳಿಸುವ ಪ್ರಯತ್ನ ಮಾಡುವಲ್ಲಿ ಹಾಲಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪನವರು ಸಕ್ರಿಯರಾಗಿದ್ದಾರೆ.
ಜಿಲ್ಲಾ ಸಹಕಾರ ಬ್ಯಾಂಕ್ನಲ್ಲಿ ನಡೆದ 64 ಕೋಟಿ ರೂ ಬಂಗಾರದ ಸಾಲದ ಅವ್ಯವಹಾರ ಕುರಿತು ಚಕಾರವೆತ್ತದ ನಿರ್ದೇಶಕ ದುಗ್ಗಪ್ಪಗೌಡರು ಗೊಂದಲ ಸೃಷ್ಟಿಸುವ ಬಹಿರಂಗ ಹೇಳಿಕೆ ನೀಡಿರುವುದು ಖಂಡನೀಯವೆಂದರು.
ಎಂ.ಬಿ.ಚನ್ನವೀರಪ್ಪನವರ ಕೇವಲ ಎರಡು ತಿಂಗಳ ಹಿಂದೆ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು ಈ ಕಡಿಮೆ ಅವಧಿಯಲ್ಲಿ ಅಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿ ಒಂದೇ ಕಡೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕ್ಷೇತ್ರಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಮತ್ತು ಠೇವಣಿದಾರರಿಗೆ ಬ್ಯಾಂಕ್ ಮೇಲೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಇದನ್ನು ಸಹಿಸದ ನಿರ್ದೇಶಕ ದುಗ್ಗಪ್ಪಗೌಡರು ಇಲ್ಲಸಲ್ಲದ ಗೊಂದಲದ ಹೇಳಿಕೆ ನೀಡಿ ದಿಕ್ಕು ತಪ್ಪಿಸುವ ಹುನ್ನಾರದಲ್ಲಿ ತೊಡಗಿಕೊಂಡಿದ್ದಾರೆಂದು ಆರೋಪಿಸಿದರು.
ಈಗಾಗಲೇ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪನವರು 1077 ಕೋಟಿ ರೂ. ಹೊಸ ರೈತ ಸದಸ್ಯರಿಗೆ ಹೆಚ್ಚವರಿ ಸಾಲ ವಿತರಣೆ ಮಾಡಿದ್ದಾರೆ ಅಲ್ಲದೆ ಮಾರ್ಚಿ ಅಂತ್ಯದಲ್ಲಿ ಬ್ಯಾಂಕ್ 1 ಕೋಟಿ ರೂ. ಲಾಭಾಂಶಗಳಿಸಿದೆ ಇಂತಹದರಲ್ಲಿ ನಿರ್ದೇಶಕ ದುಗ್ಗಪ್ಪಗೌಡರು ಅಡಳಿತ ಮಂಡಳಿಯ ಸಭೆಯಲ್ಲಿ ಕುಳಿತು ಚರ್ಚಿಸುವ ಬದಲು ಬಹಿರಂಗವಾಗಿ ಬ್ಯಾಂಕ್ ಹರಾಜು ಮಾಡುವ ಗೊಂದಲದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಮೃತ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಂಡಿ ದಿನೇಶ್, ಅರಸಾಳು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ದೊಡ್ಡಯ್ಯ, ತಳಲೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಎಸ್.ಲೋಕಪ್ಪಗೌಡರು ಹಾಜರಿದ್ದರು.
Related