ತಂಬಾಕು ನಿಯಂತ್ರಣ ತಪಾಸಣೆ ನಿರಂತರ ಕೈಗೊಳ್ಳಬೇಕು: ಜಿ.ಅನುರಾಧ

0
324

ಶಿವಮೊಗ್ಗ: ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ನಿರಂತರವಾಗಿ ತಪಾಸಣೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಟ್ಪಾ ಕಾಯ್ದೆ ಅನುಷ್ಟಾನ ಸಮಿತಿಯ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಒಟ್ಟು ಕೋಟ್ಪಾ ಕಾಯ್ದೆಯಡಿ 17ದಾಳಿಗಳನ್ನು ನಡೆಸಲಾಗಿದ್ದು, ಕಾಯ್ದೆ ಉಲ್ಲಂಘಿಸಿದ 164 ಪ್ರಕರಣಗಳನ್ನು ದಾಖಲಿಸಿ 9905 ರೂ. ದಂಡ ವಿಧಿಸಲಾಗಿದೆ. ಶಾಲಾ ಕಾಲೇಜುಗಳ 300 ಅಡಿ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ಖಾತ್ರಿಪಡಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಮಾತ್ರವಲ್ಲದೆ ಎಲ್ಲಾ ಇಲಾಖೆಗಳ ಸಹಕಾರ ಇದಕ್ಕೆ ಅಗತ್ಯವಿದೆ ಎಂದು ಅವರು ಹೇಳಿದರು.

ತಂಬಾಕು ಸೇವನೆಯ ಅಪಾಯದ ಕುರಿತು ವಿದ್ಯಾರ್ಥಿ ಯುವ ಜನರಲ್ಲಿ ವ್ಯಾಪಕವಾದ ಅರಿವು ಮೂಡಿಸುವ ಅಗತ್ಯವಿದೆ. ಕಳೆದ ಸಾಲಿನಲ್ಲಿ ಜಿಲ್ಲೆ 100 ಶಾಲಾ ಕಾಲೇಜುಗಳಲ್ಲಿ ಕೋಟ್ಪಾ ಕಾಯ್ದೆ ಬಗ್ಗೆ, ತಂಬಾಕು ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗಿದೆ. ಈ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತಂಬಾಕು ನಿಯಂತ್ರಣ ಸಮಿತಿಗಳನ್ನು ಸಹ ರಚಿಸಲಾಗಿದೆ. ಶಾಲೆಯ ಹೊರಗೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ಮಾತ್ರವಲ್ಲದೆ ಶಾಲೆಯ ಆವರಣದ ಒಳಗೆ ತಂಬಾಕು ಬಳಕೆಯ ಮೇಲೆ ನಿಗಾ ಇರಿಸುವುದು ಈ ಸಮಿತಿಯ ಕಾರ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 70 ಪದವಿ ಪೂರ್ವ ಹಾಗೂ ಕಾಲೇಜುಗಳನ್ನು ನಿಗದಿತ ಮಾರ್ಗಸೂಚಿ ಅನುಸರಣೆ ಪ್ರಕಾರ ತಂಬಾಕು ಮುಕ್ತ ಶಾಲೆಗಳೆಂದು ಘೋಷಿಸಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳನ್ನೂ ತಂಬಾಕು ಮುಕ್ತ ಕಾಲೇಜುಗಳಾಗಿ ಘೋಷಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ತಂಬಾಕು ನಿಯಂತ್ರಣದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಾಗಿದೆ. ತಂಬಾಕು ಉತ್ಪನ್ನಗಳ ಕುರಿತು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜಾಹೀರಾತು ಪ್ರದರ್ಶಿಸುವವರ ವಿರುದ್ಙ ಸೆಕ್ಷನ್ 5 ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯದ ಎಚ್ಚರಿಕೆಯನ್ನು ನಿಗದಿತ ನಮೂನೆಯಲ್ಲಿ ಪ್ರದರ್ಶಿಸದವರ ವಿರುದ್ಧ ಸೆಕ್ಷನ್ 7ರ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here