ತಂಬಾಕು ಸೇವನೆ ಮುಕ್ತ ಸಮಾಜದಿಂದ ಸದೃಢ ಆರ್ಥಿಕತೆ ಕಂಡುಕೊಳ್ಳಿ ; ನ್ಯಾಯಧೀಶ ರವಿಕುಮಾರ್ ಕರೆ

0
448

ಹೊಸನಗರ : ತಂಬಾಕು ಉತ್ಪನ್ನ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುವುದರಿಂದ ತಂಬಾಕು ಉತ್ಪನ್ನಗಳಿಂದ ಯುವಜನಾಂಗ ದೂರವಿರಬೇಕೆಂದು ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕೆ ರವಿಕುಮಾರ್ ಇಂದಿಲ್ಲಿ ಕರೆ ನೀಡಿದರು.

ಅವರಿಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಪೀಳಿಗೆ ತಂಬಾಕು ಉತ್ಪನ್ನಗಳಿಗೆ ಮುಗಿಬೀಳುತ್ತಿದ್ದ ಕಾರಣ ಅವರ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಅವರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಕೆಲವು ಸಂಘಟನೆಗಳಿಂದ ಯುವಪೀಳಿಗೆಯ ರಕ್ಷಣೆ ಅಗತ್ಯವಾಗಿದೆ. ಯುವಶಕ್ತಿ ಬಲಿಷ್ಠವಾದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಲು ಸಾಧ್ಯ ಎಂದರು.

ವಿದ್ಯಾಸಂಸ್ಥೆಗಳ ಆವರಣದಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಈ ಕಾನೂನು ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದ್ದು 200 ರವರೆಗೆ ಕಾಯ್ದೆಯಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಹೇಮಂತ್ ಪ್ರಾಸ್ತಾವಿಕ ನುಡಿ ನುಡಿದು, ತಂಬಾಕು ಉತ್ಪನ್ನ ನಿಷೇಧಕ್ಕೆ ಮೊದಲು ಅದರ ನಿಯಂತ್ರಣ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕೆಂದರು.

ಶಾಲಾ – ಕಾಲೇಜು ಮಕ್ಕಳಲ್ಲದೆ ಇತ್ತೀಚಿಗೆ ಚಿಕ್ಕಮಕ್ಕಳು ಸಹ ತಂಬಾಕು ಉತ್ಪನ್ನಗಳ ದಾಸರಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು ಹಾಗೂ ತಂಬಾಕು ಉತ್ಪನ್ನಗಳ ನಿಯಂತ್ರಣ ಅರಿವು ಮೂಡಿಸುವ ಕಾರ್ಯ ಕೇವಲ ದಿನಾಚರಣೆಯ ದಿನ ಮಾತ್ರವಲ್ಲದೆ ನಿರಂತರ ಪ್ರಕ್ರಿಯೆಯಾಗಬೇಕೆಂದರು.

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಅವರು ಮಾತನಾಡಿ, ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಧೂಮಪಾನ ನಿಷೇಧದ ನಾಮಫಲಕ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು ಇದರಿಂದ ತಂಬಾಕಿನಿಂದಾಗುವ ದುಷ್ಪರಿಣಾಮಗಳು ತಡೆಗಟ್ಟಲು ಸಾಧ್ಯವಾಗುವ ಸಂಭವವಿದೆ ಎಂದು ತಿಳಿಸಿದರು.

ರೇಣುಕಾ ಪ್ರಾರ್ಥಿಸಿದರು. ಹೆಚ್.ಎಸ್ ಚಂದ್ರಪ್ಪ ರಮೇಶ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here