ತರೀಕೆರೆ ; ಪುರಸಭೆ ಬಜೆಟ್‌ನಲ್ಲಿ 6.83 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

0
112

ತರೀಕೆರೆ : ಪುರಸಭೆಯಲ್ಲಿ ಅಧ್ಯಕ್ಷ ರಂಗನಾಥ್ ನೇತೃತ್ವದಲ್ಲಿ ನಡೆದ 2022-23ನೇ ಸಾಲಿನ ಆಯ-ವ್ಯಯ ಮಂಡನೆ ಸಭೆಯಲ್ಲಿ 6.83 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.

ಪುರಸಭೆ ಸಭಾಂಗಣದಲ್ಲಿ ಬಜೆಟ್ ಮಂಡಿಸಿದ ಅವರು, 2022-23ನೇ ಸಾಲಿನಲ್ಲಿ ತರೀಕೆರೆ ಪುರಸಭೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಹಂಚಿಕೆಯಾಗಿ ಬಿಡುಗಡೆಯಾಗುವ ಅನುದಾನಕ್ಕೆ ಸರ್ಕಾರದ ಮಾರ್ಗಸೂಚಿಗಳನುಸಾರ ಕ್ರಿಯಾ ಯೋಜನೆಗಳನ್ನು ರೂಪಿಸಿ ಪಟ್ಟಣದ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು. ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ವೇತನಾನುದಾನ ರೂ. 253.00 ಲಕ್ಷಗಳನ್ನು ಕಛೇರಿಯ ಎಲ್ಲಾ ಶಾಖೆಗಳ ಖಾಯಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ವೇತನ ಮತ್ತು ಭತ್ಯೆಗಳ ಪಾವತಿಗೆ ಮೀಸಲಿಡಲಾಗಿದೆ. ಹೊರಗುತ್ತಿಗೆ ಪೌರಕಾರ್ಮಿಕರ ವೇತನಕ್ಕಾಗಿ ಶೇ.100 ರಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

2022-23ನೇ ಸಾಲಿಗೆ ಎಸ್.ಎಫ್.ಸಿ. ಕುಡಿಯುವ ನೀರಿನ ಅಭಾವ ಪರಿಹಾರ ಅನುದಾನ ರೂ. 5.00 ಲಕ್ಷ ಹಂಚಿಕೆಯಾಗುವ ನಿರೀಕ್ಷೆಯಿದ್ದು, ಸದರಿ ಮೊತ್ತದಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಪಟ್ಟಣದ ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಿಸಿ ಮೋಟರ್ ಪಂಪ್ ಅಳವಡಿಸಿ‌‌ ಕಿರು ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. 2022-23ನೇ ಸಾಲಿನ ತರೀಕೆರೆ ಪುರಸಭೆಗೆ ಸರ್ಕಾರದಿಂದ ಎಸ್.ಎಫ್.ಸಿ.ಐ.ಇ.ಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳಿಗೆ ರೂ. 5.00 ಲಕ್ಷಗಳ ಅನುದಾನ ಹಂಚಿಕೆಯಾಗುವ ನಿರೀಕ್ಷೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯವನ್ನು ನಿರ್ವಹಣೆ ಸಮಗ್ರ ಯೋಜನಾ ವರದಿಯ ಮೊತ್ತ ರೂ. 384.42 ಲಕ್ಷಗಳಷ್ಟಿದ್ದು, ಈ ಪೈಕಿ ಕೇಂದ್ರ ಸರ್ಕಾರದ ಅನುದಾನ ರೂ. 134.55 ಲಕ್ಷಗಳು, ರಾಜ್ಯ ಸರ್ಕಾರದ ಅನುದಾನ ರೂ. 89.69 ಲಕ್ಷಗಳು ಹಾಗೂ ಸ್ಥಳೀಯ ಸಂಸ್ಥೆಯ ಪಾಲು ರೂ. 160.19 ಲಕ್ಷಗಳಷ್ಟಿದ್ದು, ಈ ಪೈಕಿ ಮಂಜೂರಾಗಿರುವ 12 ಕಾಮಗಾರಿಗಳಲ್ಲಿ 08 ಕಾಮಗರಿಗಳು ಪೂರ್ಣಗೊಂಡಿದ್ದು, ಬಾಕಿ ಇರುವ 04 ಕಾಮಗಾರಿಗಳಾದ ವಾಚ್‍ಮನ್ ಶೆಡ್ ನಿರ್ಮಾಣ, ವೇಬ್ರಿಡ್ಜ್ ಕಂಟ್ರೋಲ್ ಸ್ಟೇಷನ್ ನಿರ್ಮಾಣ, ಏರೋಬಿಕ್ ಲಿಚೆಟ್ ಟ್ಯಾಂಕ್ ನಿರ್ಮಾಣ, ಅನ್‍ಏರೋಬಿಕ್ ಲಿಚೆಟ್ ಟ್ಯಾಂಕ್ ನಿರ್ಮಾಣ ಕಾಮಗಾರಿಗಳನ್ನು 2022-23 ನೇ ಸಾಲಿನಲ್ಲಿ ಕೈಗೊಳ್ಳಲಾಗುವುದು ಎಂದರು.

ತರೀಕೆರೆ ಪುರಸಭೆ ಸ್ವಚ್ಛತಾ ಕಾರ್ಯದಲ್ಲಿ ರಾಜ್ಯದ ಗಮನ ಸೆಳೆದಿದ್ದು, ಸ್ವಚ್ಛ ಸರ್ವೆಕ್ಷಣ್-2021 ರಲ್ಲಿ ತರೀಕೆರೆ ಪುರಸಭೆಯು ಸ್ವಚ್ಛತೆಯಲ್ಲಿ ರಾಜ್ಯದಲ್ಲಿಯೇ-3ನೇ ರ್ಯಾಂಕ್, ದಕ್ಷಿಣ ಭಾರತದಲ್ಲಿ 17ನೇ ರ್ಯಾಂಕ್ ಪಡೆದುಕೊಂಡಿದ್ದು, ಪುರಸಭೆಯ ಎಲ್ಲಾ ಸದಸ್ಯರ ಪರವಾಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ಪೌರಕಾರ್ಮಿಕ ಬಂಧುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಇನ್ನೂ ಉಳಿದ ಬಜೆಟ್ ಬಗ್ಗೆ ಮುಂದುವರಿಸಿದ ನಂತರ 11ನೇ ವಾರ್ಡ್‌ನ ಸದಸ್ಯರಾದ ಆಚಾರ್ಯ ಅಶೋಕ್‍ರವರು ಖಾತೆ ಬದಲಾವಣೆ ತೆರಿಗೆ ಬಗ್ಗೆ ಆಕ್ಷೇಪಣೆ ವ್ಯಕ್ತ ಪಡಿಸಿ ಸಾರ್ವಜನಿಕರು ಈಗಾಗಲೇ ಕಳೆದ 3 ವರ್ಷಗಳಿಂದ ಕೋವಿಡ್‍ನಿಂದ ಬಳಲಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ನೂತನ ತೆರಿಗೆಗಳನ್ನು ಹಾಕುವುದು ಸಮಂಜಸವಲ್ಲ ಎಂದರು. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪುರಸಭೆ ನಿಧಿಯಿಂದ ಶೌಚಾಲಯವನ್ನು ನಿರ್ಮಾಣ ಮಾಡುವುದು ಸೂಕ್ತವಲ್ಲ. ಸರ್ಕಾರಿ ಕಾಲೇಜುಗಳಿಗೆ ಸರ್ಕಾರದ ಅನುದಾನಗಳಿರುತ್ತವೆ ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಟಿ.ಎಂ. ಬೋಜರಾಜ ಮಾತನಾಡಿ, ಅನಗತ್ಯವಾದ ವಿಚಾರಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿ ಮಾಡುವಂತಹ ವಿಭಿನ್ನ ತೆರಿಗೆಗಳನ್ನು ಈ ಬಜೆಟ್‍ನಲ್ಲಿ ಸೇರಿಸಲಾಗಿದೆ. ಅಲ್ಲದೆ ತರೀಕೆರೆ ಇತಿಹಾಸದ ಬಗ್ಗೆ ಮತ್ತು ತರೀಕೆರೆಯ ಪುರಸಭೆಗೆ ಸಂಬಂಧಿಸಿದ ಹಿರಿಯ ನಾಗರೀಕರುಗಳ ಹೆಸರುಗಳನ್ನು ಸ್ಮರಿಸುವಂತಹ ಕಾರ್ಯಕ್ರಮಗಳು ಪುರಸಭೆಯಿಂದಾಗಬೇಕು ರಾಜ್ಯಾದ್ಯಂತ ಇತರೆ ಪುರಸಭೆಗಳ ಆಧುನಿಕತೆಗಳ ಬಗ್ಗೆ ತಿಳಿಯಲು ಅಧ್ಯಯನ ಪ್ರವಾಸವನ್ನು ಕೈಗೊಳಬೇಕೆಂದು ಸಲಹೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here