ಚಿಕ್ಕಮಗಳೂರು : ನಗರದ ಮಲ್ಲಂದೂರು ರಸ್ತೆಯಲ್ಲಿ ಫುಟ್ ಪಾತ್ ಮೇಲೆ ನಿಲ್ಲಿಸಿದ ತಳ್ಳು ಗಾಡಿಯೊಂದಕ್ಕೆ ನಗರಸಭೆ ಬೆಂಕಿಯಿಟ್ಟ ಘಟನೆ ನಡೆದಿದೆ.
ತಳ್ಳುಗಾಡಿಯ ಮಾಲೀಕನಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಬಂದ ನಗರಸಭೆ ಸಿಬ್ಬಂದಿ ತಳ್ಳು ಗಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿರುವ ವಿಡಿಯೋ ವೈರಲ್ ಆಗಿದೆ.
ರಸ್ತೆ ಬದಿಗಳಲ್ಲಿ ತಳ್ಳುಗಾಡಿಗಳನ್ನು ಇಟ್ಟುಕೊಂಡು ಅನೇಕ ವರ್ಷಗಳಿಂದ ವ್ಯಾಪಾರವನ್ನು ನಡೆಸುತ್ತಿದ್ದು ಇದಕ್ಕೆ ಪರವಾನಗಿ ಸಹ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಳ್ಳಂಬೆಳಗ್ಗೆ ಮಲ್ಲಂದೂರು ರಸ್ತೆಗೆ ದಿಢೀರ್ ಎಂದು ಬಂದಿರುವ ನಗರಸಭೆಯ ಸಿಬ್ಬಂದಿಗಳು ತಳ್ಳುಗಾಡಿಯನ್ನು ಫುಟ್ ಬಾತ್ ನಿಂದ ಪಕ್ಕಕ್ಕೆ ತಳ್ಳಿ ಬೆಂಕಿ ಹಚ್ಚಿ ಬಡವರ ಹೊಟ್ಟೆಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶಾಸಕರು ಹೇಳಿದ್ದರು. ಆದರೆ, ಈಗ ಬಡವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಟೀಕಿಸಿ ಆಗಿರುವ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ ? ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಬಗ್ಗೆ ಕೆಲವರು ಪ್ರತಿಕ್ರಿಯಿಸಿ ನಗರಸಭೆ ಸಿಬ್ಬಂದಿ ಬೆಂಕಿ ಹಾಕಿಲ್ಲ. ತಳ್ಳುಗಾಡಿ ಮಾಲೀಕರೇ ಬೇಸತ್ತು ಬೆಂಕಿ ಹಚ್ಚಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Related