ತಾರಕಕ್ಕೇರಿದ ಅಧ್ಯಕ್ಷ – ಸಿಇಓ ನಡುವಿನ ಕಿತ್ತಾಟ.. ! ಇದು ಹುಂಚ ಕೃಷಿ ಪತ್ತಿನ ಸಹಕಾರ ಸಂಘದ ಕಥೆ-ವ್ಯಥೆ … !!

0
933

ರಿಪ್ಪನ್‌ಪೇಟೆ: ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದ ನಡುವೆ ಸಾಮರಸ್ಯ ಇದ್ದಲ್ಲಿ ಸಂಘದ ಅಭಿವೃದ್ಧಿ, ಗ್ರಾಹಕರ ಹಿತ ಕಾಪಾಡಿಕೊಂಡು ಯಾವುದೇ ಸಹಕಾರಿ ಸಂಘ ಮುಂಚೂಣಿಗೆ ಬರುವುದು ಸರ್ವೆಸಾಮಾನ್ಯ. ಆದರೆ, ಈ ಈರ್ವರ ನಡುವೆ ಭಿನ್ನಾಭಿಪ್ರಾಯ, ವೈಮನಸ್ಸು, ಅಸಹಕಾರ, ದೌರ್ಜನ್ಯ, ಮಾನಸಿಕ ಕಿರುಕುಳದಂತಹ ಸಾಮಾಜಿಕ ಅಭದ್ರತೆ ನುಸುಳಿದರೆ ಸಂಘದ ಗ್ರಾಹಕರ ಪಾಡೇನು?! ಎಂಬ ಯಕ್ಷಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತದೆ.

ಇದಕ್ಕೆ ಹೊಸನಗರ ತಾಲೂಕಿನ ಹುಂಚ ಗ್ರಾಮದ ಹುಂಚ ಕೃಷಿ ಪತ್ತಿನ ಸಹಕಾರ ಸಂಘವು ಹೊರತಾಗಿಲ್ಲ ಎಂಬ ವಿಷಯ ಇಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅದು, ಸಂಘದ ಹಾಲಿ ಅಧ್ಯಕ್ಷ ಹೆಚ್.ಎಸ್. ಯಧುಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್. ಸರೋಜಾ ಅವರ ನಡುವಿನ ಅಸಹಕಾರ ಚಳುವಳಿಯು ಸಂಘದ ಸಹಕಾರಿಗಳ ಭವಿಷ್ಯಕ್ಕೆ ಮಾರಕವಾಗುವ ದಿನ ದೂರವಿಲ್ಲ ಎಂಬ ಮಾತಾಗಿದೆ.

ಕಳೆದ 15 ವರ್ಷಗಳಿಂದ ಈ ಸಂಘದ ಸಿಇಓ ಆಗಿ ಕರ್ತವ್ಯ ನಿರ್ವಹಿತ್ತಿರುವ ಹೆಚ್. ಸರೋಜ ಅವರಿಗೆ, 2018-19ರಲ್ಲಿ ಆಯ್ಕೆಯಾದ ಆಡಳಿತ ಮಂಡಳಿ ಅಸಹಕಾರ ತೋರುತ್ತಿದೆ ಎಂಬ ಆರೋಪವಿದೆ. ಅಧ್ಯಕ್ಷ ಹೆಚ್.ಎಸ್. ಯದುಕುಮಾರ್ ಅಧ್ಯಕ್ಷತೆಯ ಆಡಳಿತ ಮಂಡಳಿಯು ಸಿಬ್ಬಂದಿಗಳ ಹಾಜರಾತಿ ಪುಸ್ತಕ ಕಸಿದುಕೊಂಡು ತಾವೇ ನಿರ್ವಹಿಸುತ್ತಿರುವುದು, ಮಹಿಳಾ ಸಿಬ್ಬಂದಿಗಳಿಗೆ ಮೀಸಲಾಗಿದ್ದ ಶೌಚಾಯಲ ನಾಶಪಡಿಸಿರುವುದು, ಭದ್ರತೆ ಹಿನ್ನಲೆಯಲ್ಲಿ ಕಚೇರಿಗೆ ಸೂಕ್ತ ಸಿಸಿ ಕ್ಯಾಮೆರಾ ಅಳವಡಿಸದೇ ಇರುವುದು, ಕೋಟ್ಯಂತರ ಹಣ ವಹಿವಾಟು ಸಂಘ ನಡೆಸುತ್ತಿದ್ದರೂ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಮೀನಾ-ಮೇಷ ಎಣಿಸುತ್ತಿರುವುದು, ಸಹಕಾರಿ ತತ್ವಕ್ಕೆ ವಿರುದ್ದವಾದರೂ ಸ್ವಂತ ಜೆಸಿಬಿ ಬಳಸಿ ಖರ್ಚಿನ ಹಣ ಡ್ರಾ ಮಾಡುವಂತೆ ಒತ್ತಾಯಿಸುವುದು ತಪ್ಪಿದಲ್ಲಿ 2012ರಿಂದ ಲೆಕ್ಕ ಪರಿಶೋಧನೆಗೆ ಕ್ರಮಕೈಗೊಳ್ಳುವುದಾಗಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಹಲವಾರು ಆರೋಪಗಳ ಸರಮಾಲೆಯೇ ಆಡಳಿತ ಮಂಡಳಿ ಮೇಲೆ ಕೇಳಿಬರುತ್ತಿದೆ. ಸಾಲ ವಸೂಲಾತಿಯಲ್ಲಿ ವಿಳಂಬವಾದರೆ ಸಿಬ್ಬಂದಿಗಳನ್ನೇ ನೇರ ಹೊಣೆ ಮಾಡುವ ಬೆದರಿಕೆಯೊಂದಿಗೆ ಮಾನಸಿಕ ಕಿರುಕುಳ ನೀಡುವ ಆಡಳಿತ ಮಂಡಳಿಯ ಪರಿ ಸಿಬ್ಬಂದಿಗಳನ್ನು ಮುಂದೇನು . . .?! ಎಂಬಂತೆ ಚಿಂತಾಕ್ರಾಂತರನ್ನಾಗಿಸಿದೆ ಎನ್ನಲಾಗುತ್ತಿದೆ.

ಈ ಕೂಡಲೇ ಸಹಕಾರಿ ಸಂಘದ ನಿಬಂಧಕರು ಮಧ್ಯ ಪ್ರವೇಶಿಸಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ನಡುವೆ ಸಾಮರಸ್ಯ ಮೂಡಿಸಿದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಂಭವನೀಯ ಅವಘಡ ತಪ್ಪಿಸಬಹುದಾಗಿದೆ ಎಂಬುದು ಪ್ರಜ್ಞಾವಂತ ಹಿರಿಯ ಸಹಕಾರಿಗಳ ನುಡಿಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here