ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಕೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

0
603

ಹೊಸನಗರ: 2021-22ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಅಥವಾ ತುಂತುರು ನೀರಾವರಿ ಅಳವಡಿಕೆಗೆ ನೀಡಲಾಗುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಶೇ.90 ರಂತೆ ಸಹಾಯಧನ ನೀಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 2 ಹೆಕ್ಟೇರ್‌ ನಂತರದಲ್ಲಿ 5 ಹೆಕ್ಟೇರ್ ಪ್ರದೇಶದ ವರೆಗೆ ಶೇ.45ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ. ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೊರತುಪಡಿಸಿ ಉಳಿದ ಎಲ್ಲ ರೈತರಿಗೆ 5 ಹೆಕ್ಟೇರ್ ಪ್ರದೇಶದವರೆಗೂ ಶೇ.45 ರಂತೆ ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗದಡಿ ಶೇ.90 ರಂತೆ ಸಹಾಯಧನ ಪಡೆಯಲು ಕಂದಾಯ ಇಲಾಖೆಯಿಂದ ಪ್ರಸಕ್ತ ಸಾಲಿನ ಸಣ್ಣ/ಅತಿ ಸಣ್ಣ ರೈತ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ತಾಲ್ಲೂಕಿನ ತೋಟಗಾರಿಕೆ ಕಛೇರಿಗಳಲ್ಲಿ ಪಡೆದು, ಅಗತ್ಯ ದಾಖಲಾತಿಗಳಾದ ಪ್ರಸಕ್ತ ಸಾಲಿನ ಮೂಲ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಉಳಿತಾಯ, ಪುಸ್ತಕ, ರೇಷನ್ ಕಾರ್ಡ್‌ನ ನಕಲು ಪ್ರತಿಗಳು, ಪರಿಶಿಷ್ಟ ಜಾತಿ ಅಥವಾ ಪಂಗಡ ವರ್ಗದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರವನ್ನು ಲಗತ್ತಿಸಿ, ಅರ್ಜಿಯನ್ನು ಸಲ್ಲಿಸುವುದು.

ಒಂದು ವೇಳೆ ರೈತರು ಹನಿ ನೀರಾವರಿ ಅಳವಡಿಸಲು ಪೂರ್ಣ ಹಣ ಭರಿಸಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ರೈತರ ಬಾಬ್ತಿನ ಮೊತ್ತವನ್ನು ಮಾತ್ರ ಪಾವತಿಸಿ ಸಹಾಯಧನದ ಮೊತ್ತಕ್ಕೆ ಸಮನಾದ ಮೊತ್ತವನ್ನು ಸಂಸ್ಥೆಯವರೇ ಭರಿಸಿ, ನಂತರ ಸಹಾಯಧನ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಗೆ ಪಾವತಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 20 ಅಕ್ಟೋಬರ್ 2021 ಆಗಿದ್ದು, ಸಲ್ಲಿಕೆಯಾದ ಅರ್ಜಿಗಳನ್ನು ಅನುದಾನದ ಲಭ್ಯತೆ ಹಾಗೂ ಜೇಷ್ಠತೆಯನುಸಾರ ಕಾರ್ಯಾದೇಶ ನೀಡಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ಕಾರ್ಯಾದೇಶ ಪಡೆದು ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಹನಿ ನೀರಾವರಿ ಕಂಪನಿಗಳಿಂದ ISI ಗುಣಮಟ್ಟದ ಉಪಕರಣಗಳನ್ನು ಅಳವಡಿಸಿಕೊಂಡು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ವಿಶೇಷ ಸೂಚನೆ:

ಕಾರ್ಯಾದೇಶ ಪಡೆಯದೇ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದರೆ ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ, ರೈತರುಗಳು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here