23.2 C
Shimoga
Sunday, November 27, 2022

ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : 2022-23ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ/ತುಂತುರು ನೀರಾವರಿ
ಅಳವಡಿಕೆಗೆ ನೀಡಲಾಗುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ತೊಟಗಾರಿಕಾ ಉಪನಿರ್ದೇಶಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಶೇ.90 ರಂತೆ ಹಾಗೂ ಸಾಮಾನ್ಯ
ವರ್ಗದ ರೈತರಿಗೆ ಶೇ.75 ರಂತೆ ಸಹಾಯಧನ ನೀಡಲಾಗುವುದು. 2 ಹೆಕ್ಟೇರ್‌ ನಂತರದಲ್ಲಿ 5 ಹೆಕ್ಟೇರ್‌ ಪ್ರದೇಶದವರೆಗೆ
ಶೇ.45ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ.
ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ತಾಲ್ಲೂಕಿನ ತೋಟಗಾರಿಕೆ ಕಛೇರಿಗಳಲ್ಲಿ ಪಡೆದು, ಅಗತ್ಯ
ದಾಖಲಾತಿಗಳಾದ ಪ್ರಸಕ್ತ ಸಾಲಿನ ಮೂಲ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಉಳಿತಾಯ ಪುಸ್ತಕ, ರೇಷನ್
ಕಾರ್ಡ್‌ ನಕಲು ಪ್ರತಿಗಳು, ಪರಿಶಿಷ್ಟ ಜಾತಿ/ಪಂಗಡ ವರ್ಗದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿಯನ್ನು ಸಲ್ಲಿಸುವುದು.


ಒಂದು ವೇಳೆ ರೈತರು ಹನಿ ನೀರಾವರಿ ಅಳವಡಿಸಲು ಪೂರ್ಣ ಹಣ ಭರಿಸಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ರೈತರ ಬಾಬಿನ ಮೊತ್ತವನ್ನು ಮಾತ್ರ ಪಾವತಿಸಿ ಸಹಾಯಧನದ ಮೊತ್ತಕ್ಕೆ ಸಮನಾದ ಮೊತ್ತವನ್ನು ಸಂಸ್ಥೆಯವರೇ ಭರಿಸಿ, ನಂತರ ಸಹಾಯಧನ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಗೆ ಪಾವತಿಸಲು ಅವಕಾಶವಿರುತ್ತದೆ.


ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 31 ಡಿಸೆಂಬರ್ 2022 ಆಗಿದ್ದು, ಸಲ್ಲಿಕೆಯಾದ ಅರ್ಜಿಗಳನ್ನು ಅನುದಾನದ ಲಭ್ಯತೆ
ಹಾಗೂ ಜೇಷ್ಠತೆಯನುಸಾರ ಕಾರ್ಯಾದೇಶ ನೀಡಿ, 2022-23ನೇ ಸಾಲಿನ ಮಾರ್ಗಸೂಚಿಯನ್ವಯ ಸಹಾಯಧನಕ್ಕೆ
ಪರಿಗಣಿಸಲಾಗುವುದು. ಕಾರ್ಯಾದೇಶ ಪಡೆದು ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಹನಿ ನೀರಾವರಿ
ಕಂಪನಿಗಳಿಂದ ISI ಗುಣಮಟ್ಟದ ಉಪಕರಣಗಳನ್ನು ಅಳವಡಿಸಿಕೊಂಡು ಸದರಿ ಯೋಜನೆಯ ಸದುಪಯೋಗ
ಪಡೆದುಕೊಳ್ಳಬಹುದು. ಅಲ್ಲದೇ, ಸದರಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಪದ್ಧತಿಗೆ ವಿಮೆ ಮಾಡಿಸಿಕೊಳ್ಳಲು ಅವಕಾಶವಿದ್ದು, ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ ಈ ಹಿಂದೆ ರೇಷ್ಮೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಹಾಯಧನ ಪಡೆದಿದ್ದರೂ ಸಹಾ,
ಸದರಿ ಘಟಕ ಹಾಳಾಗಿದ್ದಲ್ಲಿ ಅಥವಾ ಘಟಕ ಕಾರ್ಯನಿರ್ವಹಿಸದೇ ಇದ್ದಲ್ಲಿ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯಧನಕ್ಕಾಗಿ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ.


ವಿಶೇಷ ಸೂಚನೆ:

ಕಾರ್ಯಾದೇಶ ಪಡೆಯದೇ ಹನಿ/ತುಂತುರು ನೀರಾವರಿ ಘಟಕ ಅಳವಡಿಸಿಕೊಂಡಲ್ಲಿ ಸಹಾಯಧನಕ್ಕೆ
ಪರಿಗಣಿಸಲಾಗುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ, ರೈತರುಗಳು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ
ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯ
ಪಡೆಯಬಹುದಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!