ತ್ಯಾವರೆಕೊಪ್ಪದಲ್ಲಿ ಸುಳ್ಳು ದಾಖಲೆ ಸೃಷಿಸಿ ಜಮೀನು ಕಬಳಿಕೆ ಯತ್ನ ; ಗ್ರಾಮಸ್ಥರಿಗೆ ಬೆದರಿಕೆ!

0
224

ಶಿವಮೊಗ್ಗ: ಸುಳ್ಳು ಸಂಬಂಧದ ದಾಖಲೆಗಳನ್ನು ಸೃಷ್ಠಿಸಿಕೊಂಡು ನಮ್ಮ ಜಮೀನನ್ನು ಕಬಳಿಸಲು ಮುಂದಾಗಿರುವ ಸುಮಿತ್ರಾ ಬಾಯಿ ಹಾಗೂ ನಾಗರಾಜನಾಯ್ಕ್ ಎಂಬುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಮಗೆ ಹಾಗೂ ನಮ್ಮ ಭೂಮಿಗೆ ರಕ್ಷಣೆ ನೀಡಬೇಕೆಂದು ಪುರದಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಗ್ರಾಮ ಪಂಚಾಯಿತಿಯ ತಾವರೆಕೊಪ್ಪ ನಿವಾಸಿಗಳಾಗಿರುವ ನಾವು ಕೃಷಿ ಭೂಮಿಯನ್ನು ಹೊಂದಿರುತ್ತೇವೆ. ಇಲ್ಲಿ ಕೆಲವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಈಗಾಗಲೇ ಸ್ವಾಧೀನದಲ್ಲಿರುವ ಕೃಷಿ ಭೂಮಿ ಈಗ ನಮಗೆ ಮಂಜೂರಾಗಿದೆ. ಮನೆಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಲು ಗ್ರಾಮ ಪಂಚಾಯಿತಿ ಮುಂದಾಗಿದೆ. ಆದರೂ ಈ ಗ್ರಾಮದವರಲ್ಲದ ಸುಮಿತ್ರಬಾಯಿ ಹಾಗೂ ನಾಗರಾಜನಾಯ್ಕ ಎಂಬುವವರು ಯಾವುದೋ ವ್ಯಕ್ತಿಗೆ ಬೇರೆ ಕಡೆ ಮಂಜೂರಾಗಿರುವ ದಾಖಲೆಯ ಸರ್ವೇ ನಂಬರ್ ಬದಲಿಸಿಕೊಂಡು ಸುಳ್ಳು ಸಂಬಂಧದ ದಾಖಲೆ ಸೃಷ್ಠಿಸಿ ಸ್ಥಳೀಯರಿಗೆ ಕಿರುಕುಳ ನೀಡಲು ಮುಂದಾಗಿರುತ್ತಾರೆ ಎಂದು ಆರೋಪಿಸಿದರು.

ನಮಗೆ ಹಾಗೂ ಅಧಿಕಾರಿಗಳಿಗೆ ಪದೇ ಪದೇ ಜಾತಿನಿಂದನೆ ಹಾಗೂ ಕ್ರಿಮಿನಲ್ ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕುತ್ತಿರುವ ನಾಗರಾಜ್ ನಾಯ್ಕ್ ಈಗಾಗಲೇ ಹಲವರ ವಿರುದ್ಧ ಸುಳ್ಳು ದೂರು ದಾಖಲಿಸಿರುವುದರಿಂದ ನಮಗೆ ಭಯವಾಗುತ್ತಿದೆ. ಗ್ರಾಮಾಂತರ ಪೊಲೀಸ್ ಇನ್ಸ್‌ಸ್ಪೇಕ್ಟರ್ ಕಳೆದ ಏಪ್ರಿಲ್ ೨೯ರಂದು ಸದರಿ ಜಮೀನಿನಲ್ಲಿ ನಾಗರಾಜ್ ನಾಯ್ಕ್ ವಾಸವಿರುವುದಾಗಲೀ, ಅಥವಾ ಸಾಗುವಳಿ ಮಾಡಿರುವುದಾಗಿ ಕಂಡುಬಂದಿರುವುದಿಲ್ಲವೆಂದು ವರದಿ ಸಲ್ಲಿಸಿದ್ದಾರೆ.

ಹಿಂದೆ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದಾಗ ಮೂಲ ದಾಖಲೆಗಳಿಗೆ ಇವು ತಾಳೆ ಬರುವುದಿಲ್ಲವೆಂದು ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಉಪವಿಭಾಗಾಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿದಾಗ ನಾಗರಾಜ್ ನಾಯ್ಕ್ ಸಾಗುವಳಿ ವಿಚಾರದ ಕುರುವೇ ಇಲ್ಲವೆಂದು ಹೇಳಿದ್ದಾರೆ. ಆದರೂ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ, ನ್ಯಾಯಾಲಯಕ್ಕೆ ತಪ್ಪುಮಾಹಿತಿ ನೀಡುತ್ತಿರುವ ಸುಮಿತ್ರಬಾಯಿ ಹಾಗೂ ನಾಗರಾಜ್ ನಾಯ್ಕ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಮಗೆ ರಕ್ಷಣೆ ನೀಡಬೇಕೆಂದು ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಬಡಾವಣೆಯ ಶಾಂತಕುಮಾರ್, ರಾಜಪ್ಪ, ಪ್ರೇಮ, ನಿರ್ಮಲ, ಸುಮಿತ್ರ, ವೆಳ್ಳಿಯಮ್ಮ, ಶೇಖರ್, ಸುಬ್ರಮಣ್ಯ, ಮಂಜು ಹಾಗೂ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here