ತ್ರಿಣಿವೆ ಗ್ರಾಪಂ ಅಧ್ಯಕ್ಷನ ವಿರುದ್ಧ ಎಫ್‌ಐಆರ್ ದಾಖಲು ! ಯಾಕೆ ಗೊತ್ತಾ?

0
1589

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಲ್. ಚಂದ್ರಶೇಖರ್ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗೌದು, ತ್ರಿಣಿವೆ ಗ್ರಾಮದ ಸರ್ವೆ ನಂ. 83ರಲ್ಲಿನ ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಿ ಅದರಲ್ಲಿ 40×60 ಅಡಿ ವಿಸ್ತಿರ್ಣದ ನಿವೇಶನದ ಜಾಗವನ್ನು ತಹಶೀಲ್ದಾರ್ ಕಚೇರಿಯಿಂದ ಅಕ್ರಮ ಕಟ್ಟಡ ಜಾಗವೆಂದು ನಕಲಿ ಹಕ್ಕುಪತ್ರವನ್ನು ತಯಾರಿಸಿದ್ದಲ್ಲದೆ ಸರ್ಕಾರಕ್ಕೆ ವಂಚನೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ತಹಶೀಲ್ದಾರ್ ಕಚೇರಿಯಿಂದ ಅಕ್ರಮ ಕಟ್ಟಡ ಜಾಗ ಎಂಬುದಾಗಿ ನಕಲಿ ಹಕ್ಕುಪತ್ರ ತಯಾರಿಸಿದ್ದಲ್ಲದೆ 2009-2010 ನೇ ಸಾಲಿನಲ್ಲಿ ತ್ರಿಣಿವೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಂದ ಡಿಮಾಂಡ್ ರಿಜಿಸ್ಟರ್ ದಾಖಲಿಸಿ ಸದರಿ ಡಿಮ್ಯಾಂಡ್ ರಿಜಿಸ್ಟರ್‌ನ ಬಳಸಿಕೊಂಡು ಅಡಮಾನ ಪತ್ರ ತಯಾರಿಸಿ ತಮ್ಮ ಪತ್ನಿ ಹೆಸರಿಗೆ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ ಅನುದಾನ ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನಿದ್ದಾರೆ ಎಂದು ತಿಳಿಸಲಾಗಿದೆ.

ಹಕ್ಕುಪತ್ರ ಸಂಬಂಧ ತಹಶೀಲ್ದಾರ್ ಕಚೇರಿಯಿಂದ ಚಂದ್ರಶೇಖರ್ ಅವರ ಹೆಸರಿಗೆ ಯಾವುದೇ ಹಕ್ಕುಪತ್ರ ನೀಡಿರುವುದಿಲ್ಲ ಎಂದು ಮಾಹಿತಿ ನೀಡಿದ್ದು ಚಂದ್ರಶೇಖರ್ ಅವರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅವರನ್ನು ಬಳಸಿಕೊಂಡು ಸುಳ್ಳು ಹಕ್ಕು ಪತ್ರ ಸೃಷ್ಟಿಸಿ ಅದರ ಮೂಲಕ ಲಾಭ ಪಡೆಯುವ ಉದ್ದೇಶದಿಂದ ಸರ್ಕಾರಕ್ಕೆ ವಂಚನೆ ಮಾಡಿದ್ದಲ್ಲದೆ ಸರ್ಕಾರಕ್ಕೆ ಅಕ್ರಮ ನಷ್ಟವುಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಗ್ರಾಮಸ್ಥ ಎನ್. ಪ್ರಕಾಶ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಲಾಗಿದೆ.

ಬಂಧನಕ್ಕೆ ಆಗ್ರಹ:

ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಲ್. ಚಂದ್ರಶೇಖರ್ ಸರ್ವೆ ನಂ. 83ರಲ್ಲಿನ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಕಟ್ಟಡ ಜಾಗ ಎಂಬುದಾಗಿ ತಹಸೀಲ್ದಾರ್ ಕಚೇರಿಯಿಂದ ಕೊಡಲ್ಪಟ್ಟ ರೀತಿಯಲ್ಲಿ ಹಕ್ಕುಪತ್ರ ತಯಾರಿಸಿದ್ದಾರೆ. ಎನ್.ಎಲ್. ಚಂದ್ರಶೇಖರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದು ತಮ್ಮ ಮೇಲಿನ ಎಫ್‌ಐಆರ್‌ನಿಂದ ಬಚಾವ್ ಆಗಲು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರನ್ನು ಈ ಕೂಡಲೇ ಬಂಧನ ಮಾಡಬೇಕು ಎಂದು ಗ್ರಾಮಸ್ಥರಾದ ಎನ್. ಪ್ರಕಾಶ್, ನರೇಂದ್ರ ಕುಮಾರ್ ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here