20.6 C
Shimoga
Friday, December 9, 2022

ದಿಶಾ ಸಮಿತಿ ಸಭೆ |
ನಿಗದಿತ ಅವಧಿಯೊಳಗೆ ಗುರಿ ಸಾಧನೆಗೆ ಸಂಸದರ ಸೂಚನೆ


ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಕೇಂದ್ರ ಪುರಸ್ಕೃತ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾ ಪಂಚಾಯತ್‍ನ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಬಂದಿರುವ ಕಾರಣ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸ್ಮಾರ್ಟ್ ಸಿಟಿ, ಪಾಲಿಕೆ ಮತ್ತು ಪಿಡಬ್ಲ್ಯುಡಿ ಸಮನ್ವಯ ಸಾಧಿಸಿ ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ನಗರದ 5 ಕಡೆ ರೈಲ್ವೆ ಮೇಲ್ಸೆತುವೆ(ಆರ್‍ಓಬಿ) ಕಾಮಗಾರಿ ನಡೆಯುತ್ತಿದ್ದು ಆ ಭಾಗದ ರಸ್ತೆಗಳಲ್ಲಿ ಗುಂಡಿ ಬಿದ್ದು ಜನ ಓಡಾಡಲು ಪೇಚಾಡುತ್ತಿದ್ದಾರೆ. ಪಾಲಿಕೆ ಆಯುಕ್ತರು ಈ ಭಾಗಗಳಲ್ಲಿ ಪರಿಶೀಲಿಸಿ, ಗುಂಡಿಗಳನ್ನು ಮುಚ್ಚಿಸಿ, ತಾತ್ಕಾಲಿಕ ನಿರ್ವಹಣೆ ಕೈಗೊಳ್ಳಬೇಕೆಂದು ಸೂಚಿಸಿದರು.


ನಗರದ ಉಷಾ ನರ್ಸಿಂಗ್ ಹೋಂ ಬಳಿ ಫ್ಲೈ ಓವರ್ ಮತ್ತು ಆರ್‍ಓಬಿ ಎರಡೂ ಕೆಲಸ ನಡೆಯುತ್ತಿದ್ದು ಜನರಿಗೆ ತೊಂದರೆಯಾಗದಂತೆ ಒಂದೆಡೆ ಕ್ಲಿಯರೆನ್ಸ್ ನೀಡಿ ದ್ವಿಚಕ್ರ, ನಾಲ್ಕು ಚಕ್ರ ವಾಹನ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.


ಶಾಸಕರಾದ ಕೆ.ಬಿ.ಅಶೋಕ್‍ನಾಯ್ಕ್ ಮಾತನಾಡಿ, ಉಷಾ ನರ್ಸಿಂಗ್ ಬಳಿ ನಡೆಯುತ್ತಿರುವ ಕಾಮಗಾರಿಯಿಂದ ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ಹಾಗೂ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಬೇಕೆಂದರು.
ಸಂಸದರು, ಕೇಂದ್ರ ಸರ್ಕಾರ ರೂ.313 ಕೋಟಿ ವೆಚ್ಚದಲ್ಲಿ ಹೊಸನಗರ-ಮಾವಿನಕೊಪ್ಪ ವಯಾ ಆಡುಗೊಡಿಗೆ ಸಂಪರ್ಕಿಸುವ ನೇರ ರಸ್ತೆ ಯೋಜನೆಗೆ ಮಂಜೂರಾತಿ ನೀಡಿದ್ದು ಈ ಯೋಜನೆ ಪೂರ್ಣಗೊಂಡ ನಂತರ ಹೊಸನಗರದಿಂದ ಕೊಲ್ಲೂರಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು ಎಂದ ಅವರು ಹೊಳೆಹೊನ್ನೂರಿನಿಂದ ಶಿವಮೊಗ್ಗ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಚಿತವಾಗಿ ಗ್ರಾಮೀಣ ಭಾಗಕ್ಕೆ ಇಂಟರ್‍ನೆಟ್ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಸುವರ್ಣ ಅವಕಾಶ ಅಂತರ್ಜಾಲ ಯೋಜನೆಯಡಿ ದೇಶದಲ್ಲಿ 4 ರಾಜ್ಯಗಳ ತಲಾ ಒಂದು ತಾಲ್ಲೂಕುಗಳು ಆಯ್ಕೆಯಾಗಿದ್ದು ಅದರಲ್ಲಿ ಮೊದಲನೆಯದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ. ಸಾಗರ ತಾಲ್ಲೂಕಿನ ಪ್ರತಿ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ ಸುಮಾರು 2000 ಸಂಪರ್ಕ ನೀಡುವ ಗುರಿ ಇದ್ದು, ಬೇಡಿಕೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ಈ ಯೋಜನೆಯಡಿ ಉಚಿತ ಸಂಪರ್ಕ ಮತ್ತು ಮೋಡೆಮ್ ಸಹ ನೀಡಲಾಗುವುದು. ಮೊದಲ ಎರಡೂವರೆ ತಿಂಗಳು ಪ್ರತಿ ತಿಂಗಳಿಗೆ ರೂ.110 ಶುಲ್ಕ ವಿಧಿಸಲಾಗುತ್ತದೆ. ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿ.ಪಂ. ಯೋಜನಾ ನಿರ್ದೇಶಕಿ ನಂದಿನಿ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು ಇದುವರೆಗೆ 21,63,672 ಮಾನವ ದಿನಗಳನ್ನು ಪೂರೈಸಿ ಶೇ72.12 ಭೌತಿಕ ಮತ್ತು ಶೇ.55.05 ಆರ್ಥಿಕ ಗುರಿ ಸಾಧಿಸಲಾಗಿದೆ ಎಂದರು.


ಸಂಸದರು ಮಾತನಾಡಿ, ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯ ನೀಡಲು ಯೋಜನೆಗಳನ್ನು ಆನ್‍ಲೈನ್ ಮೂಲಕ ನೇರವಾಗಿ ಒದಗಿಸಲಾಗುತ್ತಿದ್ದು ಪಿಂಚಣಿ ಮತ್ತು ಇತರೆ ವೇತನಗಳು ಸೇರಿದಂತೆ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿ ಮನೆ ಕಟ್ಟದವರನ್ನು ಸಹ ಮನೆ ಆರಂಭಿಸದೇ ಇರುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಮನೆ ಕಟ್ಟದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮನೆ ಕಟ್ಟಲು ಇನ್ನೊಂದು ಅವಕಾಶ ನೀಡಬೇಕು. ಮನೆ ಕಟ್ಟದೇ ಹೋದಲ್ಲಿ ಅವರ ಹೆಸರನ್ನು ಕೈ ಬಿಡಬೇಕು. ಯಾಕೆಂದರೆ ಅವರ ಆಧಾರ್ ಲಿಂಕ್ ಆದ ಕಾರಣ ಅವರು ಬೇರೆ ಸೌಲಭ್ಯ ಪಡೆಯಲು ಸಹ ಅನಾನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.


ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಲ ಜೀವನ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಇರುವೆಡೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಹೊಳೆಬೆನವಳ್ಳಿ ಮತ್ತು ಬುಳ್ಳಾಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸ್ಥಾಪಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿನ ಸಮಸ್ಯೆ ಕುರಿತು ಸಮಿತಿ ಸದಸ್ಯರು ತಿಳಿಸಿದ್ದು, ಅಲ್ಲಿ ಆಗುತ್ತಿರುವ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ವೇಳೆ ತೆಗೆಯಲಾದ ಟ್ರೆಂಚ್‍ಗಳನ್ನು ಸರಿಯಾಗಿ ಮುಚ್ಚುತ್ತಿಲ್ಲ, ಪೈಪ್‍ಲೈನ್ ಆಳವಾಗಿ ಅಳವಡಿಸಲಾಗುತ್ತಿಲ್ಲವೆಂಬ ದೂರುಗಳಿವೆ. ಬೇಕಾಬಿಟ್ಟಿ ಕೆಲಸಗಳು ಆಗಬಾರದು. ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕೆಂದರು.


ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ದಿ ಯೋಜನೆಯಡಿ ಶೇ.99.95 ಪ್ರಗತಿ ಸಾಧಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿಗೆ 19859 ಅರ್ಜಿ ಸ್ವೀಕರಿಸಿ, 9841 ರೈತರ ಖಾತೆಗೆ ಕ್ಲೈಂ ಮೊತ್ತ ಜಮೆಯಾಗಿದ್ದು, ಒಟ್ಟು 691.07 ಲಕ್ಷ ಮೊತ್ತ ಜಮೆಯಾಗಿದೆ. ಹಿಂಗಾರು/ಬೇಸಿಗೆ ಹಂಗಾಮಿಗೆ 374 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.


ಸಂಸದರು, ರೈತರು ಕೇಳಿದ ರಸಗೊಬ್ಬರದ ಜೊತೆ ಇತರೆ ರಾಸಾಯನಿಕ, ಗೊಬ್ಬರಗಳನ್ನು ಹೆಚ್ಚುವರಿಯಾಗಿ ಅಂಗಡಿಯವರು ನೀಡುತ್ತಿದ್ದು, ರೈತರಿಗೆ ಹೊರೆಯಾಗುತ್ತಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದು, ಕೃಷಿ ಜಂಟಿ ನಿರ್ದೇಶಕರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಹಾಗೂ ಬೆಳೆ ಸಮೀಕ್ಷೆಯನ್ನು ತ್ವರಿತಗೊಳಿಸಿ, ಬೆಳೆ ವಿಮೆಯ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದರು.


ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ, ಅಮೃತ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸ್ಮಾರ್ಟ್ ಸಿಟಿ ಮಿಷನ್,ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ, ಸರ್ವ ಶಿಕ್ಷ ಅಭಿಯಾನ, ಸಮಗ್ರ ಶಿಶು ಅಭಿವೃದ್ದಿ ಯೋಜನೆ ಸೇರಿದಂತೆ ಎಲ್ಲ ಕೇಂದ್ರ ಪುರಸ್ಕøತ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳಿಸಿ, ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ಹಾಗೂ ಕೇಂದ್ರ ಸರ್ಕಾರದಿಂದ ಇಲಾಖೆಗಳಿಗೆ ಯೋಜನೆಗಳ ಕುರಿತು ಬರುವ ಮಾಹಿತಿಯನ್ನು ತಮ್ಮ ಗಮನಕ್ಕೆ ತಂದು ಚರ್ಚಿಸುವಂತೆ ತಿಳಿಸಿದರು.


ಸಭೆಯಲ್ಲಿ ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ದಿಶಾ ಸಮಿತಿ ಸದಸ್ಯರಾದ ಷಣ್ಮುಖಪ್ಪ, ಸುರೇಶ್, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಪಂಚಾಯತ್ ಸಿಇಓ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!