ದುರ್ಬಲ ವರ್ಗವನ್ನು ಸಬಲಗೊಳಿಸುವ ಕಾನೂನುಗಳ ಬಗ್ಗೆ ಅರಿವು ಪಸರಿಸಿ : ಎಂ.ಎಲ್.ವೈಶಾಲಿ

0
177

ಶಿವಮೊಗ್ಗ: ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗವನ್ನು ಸಬಲಗೊಳಿಸಿ, ಸಮಾನತೆ ಕಲ್ಪಿಸುವ ವಿಶೇಷ ಕಾನೂನುಗಳು, ಸೌಲಭ್ಯಗಳ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು ಸೇರಿದಂತೆ ಎಲ್ಲರೂ ತಿಳಿದು, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಮಹಿಳೆಯರಿಗೆ, ಅವಶ್ಯಕತೆ ಇರುವವರಿಗೆ ತಿಳಿಸಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ತಿಳಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿ.ಪಂ ಮತ್ತು ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಹಕ್ಕುಗಳು-ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಮಹಿಳೆಯರು ಸಮಾನ ವೇತನ, ಹೆರಿಗೆ ರಜೆ, ಇತರೆ ಸೌಲಭ್ಯಗಳೊಂದಿಗೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ ಎಂದರು.

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಾಗೂ ಮಹಿಳೆಯರು, ಮಕ್ಕಳು, ಹಿಂದುಳಿದವರು ಮತ್ತು ದುರ್ಬಲ ವರ್ಗವನ್ನು ಸಬಲೀಕರಣಗೊಳಿಸಲು ಸರ್ಕಾರ ಅನೇಕ ಕಾನೂನು ರಚಿಸಿ, ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಆದರೆ ಇದರ ಅರಿವು ಎಲ್ಲರಿಗೂ ಇಲ್ಲವಾದ ಕಾರಣ ವಿವಿಧ ಕ್ಷೇತ್ರಗಳಲ್ಲಿರುವ ಮಹಿಳೆಯರು ಈ ಬಗ್ಗೆ ಜ್ಞಾನ ಹೊಂದಿ ಇತರರಿಗೂ ತಲುಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಮಾತನಾಡಿ, ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗದ ಕುರಿತಾದ ಕಾನೂನುಗಳ ಬಗ್ಗೆ ಸುಶಿಕ್ಷಿತರಿಗೆ ಕೂಡ ಪೂರ್ಣ ಅರಿವಿಲ್ಲ. ಆದ ಕಾರಣ ಭಾರತ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರವು ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಕ್ಷೇತ್ರದಲ್ಲಿನ ಮಹಿಳೆಯರು ಈ ಬಗ್ಗೆ ತಿಳಿದು ತಮ್ಮ ಕಾರ್ಯಕ್ಷೇತ್ರದಲ್ಲಿ ಬರುವ ಹೆಣ್ಣುಮಕ್ಕಳು, ದುರ್ಬಲರಿಗೆ ತಿಳಿಸಬೇಕು. ಜೊತೆಗೆ ದೌರ್ಜನ್ಯಕ್ಕೊಳಗಾದವರಿಗೆ ಸ್ಪಂದಿಸಬೇಕು ಎಂದರು.

1995 ರ ನವೆಂಬರ್ 9 ರಂದು ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮ ಜಾರಿಗೆ ಬಂದು ಜನ ಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸುತ್ತಿದೆ. ಇದರ ಮೂಲ ಉದ್ದೇಶ ಪ್ರತಿ ಹಳ್ಳಿ ಹಳ್ಳಿಯ ಜನಸಾಮಾನ್ಯರಿಗೆ ಮೂಲಭೂತ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು. ಎಲ್ಲ ಮಹಿಳೆಯರು, ಮಕ್ಕಳು, ಹಿಂದುಳಿದವರು, ಪ.ಜಾತಿ ಮತ್ತು ಪ.ಪಂಗಡ, ಆರ್ಥಿಕವಾಗಿ ಹಿಂದುಳಿದವರು ಮತ್ತು ಇತರರಿಗೆ ಉಚಿತ ಕಾನೂನು ನೆರವು ನೀಡುವುದು ಮತ್ತು ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಉಚಿತ ಮತ್ತು ಶೀಘ್ರ ನ್ಯಾಯ ಒದಗಿಸುವುದಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ವಿಲೇವಾರಿ ಸಹ ಮಾಡುವ ಮೂಲಕ ಅಗತ್ಯವಿರುವವರಿಗೆ ಶೀಘ್ರ ನ್ಯಾಯದಾನ ಮಾಡುತ್ತಿದೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಇದ್ದು ಮಹಿಳೆಯರು ಮತ್ತು ಕಾನೂನು ನೆರವಿನ ಅಗತ್ಯವಿರುವವರು ಇಲ್ಲಿಗೆ ಭೇಟಿ ನೀಡಿ ತಾಲ್ಲೂಕು ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದವರೆಗೆ ಉಚಿತ ಕಾನೂನು ನೆರವು ಮತ್ತು ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಎನ್ ಮಾತನಾಡಿ, ಕಾನೂನು ಇದ್ದರೆ ಮಾತ್ರ ನೆಮ್ಮದಿ ಜೀವನ ಸಾಧ್ಯ. ಪ್ರಜೆಗಳೇ ಪ್ರಭುಗಳಾದ ನಮ್ಮ ದೇಶ ರಾಮರಾಜ್ಯವಾಗಬೇಕೆಂಬುದು ನೆಲದ ಕಾನೂನಿನ ಉದ್ದೇಶವಾಗಿದ್ದು ಮಹಿಳೆಯರು ಇಡೀ ಸಮುದಾಯಕ್ಕೆ ಕಾನೂನಿನ ಅರಿವನ್ನು ಪರಿಸರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಗಂಗೂಬಾಯಿ ಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಅನೇಕ ಸೌಲಭ್ಯಗಳಳು ಇದ್ದು ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಪ್ರತಿ ಹಳ್ಳಿಗಳ ಮೂಲೆ ಮೂಲೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರಯರು, ಶಿಕ್ಷಕರು, ಸುಶಿಕ್ಷತರು ಈ ಕಾಯ್ದೆ ಕಾನೂನು ಬಗ್ಗೆ ಅರಿವು ಮೂಡಿಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು, ದುರ್ಬಲರಿಗೆ ಶೀಘ್ರವಾಗಿ ಸ್ಪಂದಿಸಿ ಸಹಕರಿಸಬೇಕೆಂದರು.

ಪ್ರಸ್ತುತ ಸಾಮಾಜಿಕ ಚೌಕಟ್ಟಿನಲ್ಲಿ ಲಿಂಗ ಸಮಾನತೆಯ ಅನ್ವೇಷಣೆ ಕುರಿತು ಹಿರಿಯ ನ್ಯಾಯವಾದಿ ಈ. ಪ್ರೇಮಾ ಹಾಘೂ ವೈವಾಹಿಕ ಸಮಸ್ಯೆಗಳ ನಿರ್ವಹಣೆ-ಕಾನೂನಾತ್ಮಕ ಪರಿಹಾರ ಕುರಿತು ಹಿರಿಯ ನ್ಯಾಯವಾದಿ ಬಿ.ಎಸ್.ರೂಪಾರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here