ದೇವರ ಅನುಗ್ರಹದಿಂದ ವೈಭವದಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ: ಸಂಸದ ಬಿ.ವೈ ರಾಘವೇಂದ್ರ

0
333

ಶಿಕಾರಿಪುರ: ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸಾವು-ನೋವುಗಳ ನಡುವೆಯೂ ಭಯ ಭೀತಿಯಿಂದ ಸಾಂಪ್ರದಾಯಿಕವಾಗಿ ಸರಳವಾಗಿ ದಸರಾ ಮಹೋತ್ಸವ ನಡೆಸಲಾಯಿತು. ಆದರೀಗ ದೇವರ ಕೃಪೆಯಿಂದ ಅದು ದೂರವಾಗಿದ್ದು, ಮೊದಲಿನಂತೆ ತುಂಬಾ ವೈಭವದಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರವಾರ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಿಮರಡಿ ತಾಂಡಾದ ಗಾಳಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ಬೇಗೂರು ಗ್ರಾಮ ಪಂಚಾಯಿತಿ ಮತ್ತು ವಿವಿಧ ದೇವಸ್ಥಾನಗಳ ಉಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಎಲ್ಲಿಯೂ ಬರಗಾಲದ ವಾತಾವರಣ ನಿರ್ಮಾಣವಾಗಿಲ್ಲ. ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸಾವಿರಾರು ಜನರ ಸಾವು ನೋವುಗಳಾದವು. ಯಾವುದೇ ಒಂದು ಕುಟುಂಬದ ಸದಸ್ಯರು ಮರಣ ಹೊಂದಿದಲ್ಲಿ ಅವರ ಅಂತ್ಯಕ್ರಿಯೆಗೆ ಹೋಗದಂತಹಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆಯೂ ಸಾಂಪ್ರದಾಯಿಕವಾದ ದಸರಾ ಹಬ್ಬವನ್ನು ಸರಳವಾಗಿ ನಡೆಸಲಾಯಿತು. ಇಂತಹದ್ದೊಂದು ಕೆಟ್ಟ ಕಾಯಿಲೆಯಿಂದ ಎಲ್ಲರೂ ಹೊರಬಂದಿರುವ ನಾಡಿನ ಜನತೆ ಈ ಬಾರಿ ದೇವರ ಅನುಗ್ರಹದಿಂದ ಸುಭೀಕ್ಷೆಯಾಗಿ ಅತ್ಯಂತ ಭಕ್ತಿಯಿಂದ ವೈಭವದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ಬ್ರಹ್ಮ ದೇವರ ಬಲದಿಂದ ಮದವೇರಿದ ಮಹಾಷಾಸುರ ರಾಕ್ಷಸನನ್ನು ಮರ್ದನ ಮಾಡಲು ಆದಿಶಕ್ತಿದೇವಿಗೆ ದೇವಾನುದೇವತೆಗಳು ಒಂಬತ್ತು ದಿನಗಳ ಕಾಲ ಒಂದೊಂದು ದಿನ ಒಬ್ಬೊಬ್ಬರಾಗಿ ತಮ್ಮ ಶಕ್ತಿಯನ್ನು ನೀಡಿ ದೇವಿಗೆ ವಿಶೇಷ ಶಕ್ತಿ ತುಂಬುವ ಮೂಲಕ ಮಹಿಷಾಸುರನನ್ನು ಮರ್ದನಿ ಮಾಡಲಾಯಿತು. ಆದ್ದರಿಂದ ವಿಜಯದ ಸಂಕೇತವಾಗಿ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ವಿವಿಧೆಡೆ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ರಾಮಾಯಣದಲ್ಲಿ ರಾಮನು ರಾವಣನ ಮೇಲೆ ಯುದ್ದ ಮಾಡುವ ಸಂದರ್ಭದಲ್ಲಿ ದುರ್ಗಾ ದೇವಿಯ ಆರಾಧನೆ ಮಾಡಿ ದೇವಿಯ ವರ ಪಡೆದು ರಾವಣನನ್ನು ಗೆದ್ದ ಸಂಕೇತವಾಗಿ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಪಾಂಡವರು ಅಜ್ಞಾತವಾಸದ ಸಮಯದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಹುದುಗಿಸಿರುತ್ತಾರೆ, ಅಜ್ಞಾತವಾಸದ ಮುಗಿಸಿ ಬಂದ ನಂತರ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಆಚರಣೆ ಮಾಡಲಾಗುತ್ತಿದೆ.

ಅನೇಕ ಶರಣ ಶರಣೆಯರನ್ನ ಕಂಡು ಶಿಕಾರಿಪುರ ತಾಲ್ಲೂಕು ಒಂದು ಕಲ್ಲು ಯಡವಿದರೂ ಒಂದೊಂದು ಇತಿಹಾಸ ಸಾರುತ್ತದೆ. ಹಾಸನದಲ್ಲಿ ದೊರೆತ ಹಾಲ್ಮಡಿ ಶಾಸನವು ಕನ್ನಡದ ಮೊದಲ ಶಾಸನ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಉತ್ಖನನದಲ್ಲಿ ತಾಲ್ಲೂಕಿನ ತಾಳಗುಂದದಲ್ಲಿ ದೊರೆತ ಸಿಂಹ ಕಟಂಜನ ಶಾಸನವು ಕನ್ನಡದ ಅತ್ಯಂತ ಹಳೆಯ ಶಾಸನವಾಗಿದೆ ಎಂದು ಹೇಳಲಾಗಿದೆ. ಅಕ್ಕಮಹಾದೇವಿ ಜನ್ಮಸ್ಥಳವಾದ ಉಡುಗಣಿಯಲ್ಲಿ ಸುಮಾರು 65-70 ಅಡಿ ಎತ್ತರದ ಅಂದಾಜು 40-50 ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ಥಳಿಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದೇರೀತಿ ತಾಲ್ಲೂಕಿನಲ್ಲಿ ಬಸವಣ್ಣ ಅಲ್ಲಮ ಪ್ರಭು, ಸಂಗೊಳ್ಳಿ ರಾಯಣ್ಣ ಹೀಗೆ ಹಲವಾರು ಮಹಾಪುರುಷರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅನುಮೋದನೆಗೆ ಕ್ಯಾಬಿನೆಟ್ ಗೆ ಕಳಿಸಲಾಗಿದೆ. ಪ್ರತಿ ವರ್ಷದಂತೆ ಬನ್ನಿಮುಡಿಯುವ ಈ ಸ್ಥಳಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕೆಲಸ ಮುಂದಿನ ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ನಾಯ್ಕ್ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ತಿಳಿಸಿ ಮಾತನಾಡಿದ ಅವರು, ದಸರಾ ಹಬ್ಬವು ನಮ್ಮ ನಾಡಿನ ಪಾರಂಪರಿಕ ಹಬ್ಬವಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಮಹೋತ್ಸವ ಮೈಸೂರಿನ ರಾಜ ಮಹಾರಾಜರು ಮುನ್ನಡೆಸಿಕೊಂಡು ಬಂದಿದ್ದಾರೆ. ಮಾನವರಾದ ನಾವು ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದರ ಜೊತೆಗೆ ನಮ್ಮಲ್ಲಿರುವ ಅಜ್ಞಾನ,ಅಸತ್ಯ, ತೊರೆದು ಸತ್ಯದ ಹಾದಿಯಲ್ಲಿ ಪಡೆಯುವುದಕ್ಕಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಎಂ‌.ಪಿ ಕವಿರಾಜ್, ಶಿರಸ್ತೇದಾರ್ ಮಂಜಣ್ಣ, ಬೇಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆ ಎಸ್ ಲಕ್ಷ್ಮಣರಾವ್, ಮೆಸ್ಕಾಂ ನಿರ್ದೇಶಕ ರುದ್ರೇಶ್, ಮಾಜಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ, ಹುಚ್ಚರಾಯ ಸ್ವಾಮಿ ದೇವಸ್ಥಾನ, ಸಿರ್ಸಿ ಮಾರಮ್ಮ ದೇವಸ್ಥಾನ, ಗಿಡ್ಡಯ್ಯಸ್ವಾಮಿ ದೇವಸ್ಥಾನ, ಹುಲಿಕಟ್ಟೆಪ್ಪಸ್ವಾಮಿ ದೇವಸ್ಥಾನ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಬೇಗೂರು, ಕೋನೆ ಬಸವೇಶ್ವರ ದೇವಸ್ಥಾನ ಆಪಿನಕಟ್ಟೆ, ಬಸವೇಶ್ವರಸ್ವಾಮಿ ದೇವಸ್ಥಾನ ಬೆಂಡೇಕಟ್ಟೆ, ಹನುಮಂತ ದೇವಸ್ಥಾನ ಬಾಳೆಕೊಪ್ಪ ಹೀಗೆ ಹಲವಾರು ದೇವಸ್ಥಾನಗಳ ಸೇವಾ ಸಮಿತಿಯ ಅಧ್ಯಕ್ಷರು ವಿವಿಧ ಗ್ರಾಮಗಳ ಅನೇಕ ಭಕ್ತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಬಿ.ವೈ ರಾಘವೇಂದ್ರ ರವರಿಗೆ, ವಿವಿಧ ದೇವಸ್ಥಾನಗಳ ಸೇವಾ ಸಮಿತಿಯ ಅಧ್ಯಕ್ಷರಿಗೆ ಅಭಿನಂದಿಸಿ ಸನ್ಮಾನಿಸಲಾಯಿತಲ್ಲದೇ, ತಾಲ್ಲೂಕು ದಂಡಾಧಿಕಾರಿ ಎಂ‌.ಪಿ ಕವಿರಾಜ್ ರವರಿಂದ ಹಾಗೂ ಸಂಸದ ಬಿ.ವೈ ರಾಘವೇಂದ್ರರವರಿಂದ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here