ದೇವರ ಭಿತ್ತಿಫಲಕ ಯೋಜನೆ ಕೈಬಿಡಿ: ಪುಟ್ಟಸ್ವಾಮಿ

0
216

ಚಿಕ್ಕಮಗಳೂರು: ನಗರದ ತ್ಯಾಜ್ಯ ಸಂಗ್ರಹದ ಬಗ್ಗೆ ಪ್ರತಿಯೊಂದು ವಾರ್ಡಿನಲ್ಲಿ ಪ್ರೀತಿ, ವಿಶ್ವಾಸದೊಂದಿಗೆ ನಾಗರಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ವಚ್ಛ ನಗರಕ್ಕೆ ಕಾರ್ಯಯೋಜನೆ ರೂಪಿಸಿ ಅನುಷ್ಟಾನಗೊಳಿಸದೆ ತಮ್ಮ ಮೂರ್ಖತನ ಪ್ರದರ್ಶನದ ಮೂಲಕ ಹಿಂದೂ ದೇವರುಗಳ ನಂಬಿಕೆ, ಪಾವಿತ್ರ್ಯತೆಗೆ ಧಕ್ಕೆ ತರಲು ಯತ್ನಿಸಿರುವ ನಗರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.

ನಗರಸಭೆಯಲ್ಲಿರುವ ಅಧಿಕಾರಿಗಳು ದಕ್ಷತೆ, ಪ್ರಾಮಾಣಿಕತೆಯೊಂದಿಗೆ ತಮ್ಮ ಪಾಲಿನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ, ದೇವರ ಭಿತ್ತಿ ಫಲಕಗಳನ್ನು ಅಳವಡಿಸುವ ಮೂಲಕ ದೇವರು, ಸಂಸ್ಕೃತಿ ಧಾರ್ಮಿಕತೆ ಬಗ್ಗೆ ಜನರು ಹೊಂದಿರುವ ನಂಬಿಕೆ ಮತ್ತು ಪಾವಿತ್ರ್ಯತೆಗೆ ಧಕ್ಕೆ ತರುವ ಮತ್ತು ಮೌಢ್ಯವನ್ನು ಬಿತ್ತುವ ಕಾರ್ಯ ನಗೆಪಾಟಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿದ ಬಳಿಕ ಅದನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವುದನ್ನು ಬಿಟ್ಟು ದೇವರ ಪೋಟೋಗಳನ್ನು ಹಾಕುವುದು ಸರಿಯಲ್ಲವೆಂದಿದ್ದಾರೆ.

ಅಗತ್ಯವಾಗಿ ಬೇಕಾಗಿರುವ ಒಣ ಕಸ, ಹಸಿ ಕಸ, ಕರಗದ ಕಸವನ್ನು ವಿಂಗಡಿಸಿ ಮನೆಬಾಗಿಲಿಗೆ ಬರುವ ತಳ್ಳುಗಾಡಿಗಳಿಗೆ ಹಾಕಲು ಡಬ್ಬಗಳನ್ನೋ ಅಥವಾ ಚೀಲಗಳನ್ನೋ ನಗರಸಭೆಯವರು ಪೂರೈಕೆ ಮಾಡಬೇಕು. ಜೊತೆಗೆ ಕಸವನ್ನು ಹೇಗೆ ವಿಂಗಡಿಸಿಕೊಡಬೇಕು? ಕಸವನ್ನು ರಸ್ತೆ, ಚರಂಡಿಗೆ ಹಾಕುವುದರಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಪ್ರತಿಯೊಂದು ವಾರ್ಡಿನಲ್ಲಿ ತಜ್ಞರ ತಂಡದೊಂದಿಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮೊದಲು ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯವರು ಈ ಹಿಂದೆ ಮನೆ ಮನೆಯಿಂದ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸುತ್ತಿದ್ದರು. ಕಸದ ಮೇಲೆ ಕೆಲವರ ಕಣ್ಣು ಬಿದ್ದ ಕಾರಣದಿಂದ ಆ ಸಂಸ್ಥೆಯ ಕೆಲ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಆ ಕಾರಣದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಕಸ ಸಂಗ್ರಹಿಸುವ ಕಾರ್ಯವನ್ನು ಕೈಚೆಲ್ಲಬೇಕಾಯಿತು. ಅಲ್ಲಿಂದ ಇಲ್ಲಿಯವರೆಗೆ ಹಣ ಮಾಡುವ ಉದ್ದೇಶದಿಂದ ಕಸ ಸಂಗ್ರಹಿಸುವ ಕಾರ್ಯ ಕೆಲವರ ಕೈಗೆ ಸಿಕ್ಕಿ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿದ್ದಾರೆ.

ನಗರಸಭೆ ಸದಸ್ಯರಾದವರು, ಒಂದು ಪಕ್ಷದ ಮುಖಂಡರು ಒಟ್ಟುಗೂಡಿ ಕಸ ಸಂಗ್ರಹಿಸುವ ಕಾರ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಪರಿಣಾಮ ನಾಗರಿಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಮನೆಗಳಿಂದ ಸಂಗ್ರಹಿಸುವ ಕಸವನ್ನು ವಿಲೇವಾರಿ ಮಾಡುವ ಇಂದಾವರದಲ್ಲಿರುವ ಕೇಂದ್ರ ಬಿಳಿಯಾನೆಯಾಗಿದ್ದು, ಅದರ ಹೆಸರಿನಲ್ಲಿ ನಾಗರಿಕರ ತೆರಿಗೆ ಹಣ ಕೋಟಿ ಕೋಟಿಗಟ್ಟಲೆ ವ್ಯರ್ಥವಾಗಿ ಹೋಗಿದೆ. ಈ ಬಗ್ಗೆ ತನಿಖೆ ನಡೆಸಿದರೆ ಅನೇಕರ ಬಣ್ಣ ಬಯಲಾಗುತ್ತದೆ. ಆದರೆ, ನಗರಸಭೆ ಆಡಳಿತ ನಡೆಸುವವರು ಮತ್ತು ಸ್ಥಳೀಯ ಶಾಸಕರು ಈ ಬಗ್ಗೆ ಎಂದೂ ಗಂಭೀರ ಆಲೋಚನೆ ನಡೆಸಿಲ್ಲ. ಅದರ ಪರಿಣಾಮ ಕಸ ಸಂಗ್ರಹ ಮತ್ತು ವಿಲೇವಾರಿ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗಲು ಕಾರಣವಾಗಿದೆ ಎಂದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here