ದೇವಸ್ಥಾನಗಳು ಸಾಮರಸ್ಯದ ಕೇಂದ್ರಗಳಾಗಬೇಕು; ಬೆಕ್ಕಿನಕಲ್ಮಠದ ಡಾ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

0
489

ಹೊಸನಗರ: ದೇವಸ್ಥಾನಗಳು ಸಾಮರಸ್ಯದ ಕೇಂದ್ರಗಳಾಗಬೇಕೆಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ತಾಲ್ಲೂಕಿನ ಜಯನಗರ ಗ್ರಾಮದ ಸಾಲಗೇರಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನಃ ಪ್ರತಿಷ್ಟಾಪನಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು.

ಶಿವ ಕೈಲಾಸವಾಸಿ, ಆತನಿಗೆ ಮನೆಯಿಲ್ಲ. ಆದರೆ ನಮಗೆ ದೇವರನ್ನು ನೋಡಲು ಗುಡಿ ಬೇಕು. ಗುಡಿಯಲ್ಲಿ ಕಾಣುವ ದೇವರನ್ನೇ ಎಲ್ಲರೂ ಕಾಣುವಂತಾಗಬೇಕು. ಉಮಾಪತಿ ದೇವಸ್ಥಾನದ ಪರಿಸರ ರಮಣೀಯವಾಗಿದೆ. ಆದರಿಂದು ಎಲ್ಲೆಡೆ ಪರಿಸರ ನಾಶ ಮಾಡುವ ಮನಸ್ಥಿತಿ ಕಾಣುತ್ತಿದ್ದೇವೆ. ಪ್ರಕೃತಿಯನ್ನೇ ದೇವರೆಂದು ಭಾವಿಸುವ ನಾವು ಪರಿಸರ ನಾಶ ಮಾಡಿ ನಮ್ಮ ಜೀವನಶೈಲಿಯನ್ನು ವಿರೂಪಗೊಳಿಸಿ ಕೋವಿಡ್‌ನಂಥ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಯ ಸ್ಥಿತಿಗೆ ಬಂದಿದ್ದೇವೆ. ನಾನೊಬ್ಬನೇ ಎಂಬ ಏಕಾಂಗಿ ಭಾವನೆ ಕಳೆದು ಎಲ್ಲರೊಡನೆ ಒಂದಾಗುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ಮೂಲೆಗದ್ದೆ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ ಬಸವಣ್ಣ ಕಳಬೇಡ, ಕೊಲಬೇಡ ಎಂದೆಲ್ಲ ಹೇಳಿದರು. ಆದರೆ ನಾವಿಂದು ಅದೆಲ್ಲ ಮಾಡುತ್ತಾ ಪಕ್ಕದವರ ಬಗ್ಗೆಯೇ ಹೊಟ್ಟೆಕಿಚ್ಚಿನಿಂದ ಕೇಡು ಬಯಸುವ ಕೆಲಸ ಮಾಡುತ್ತಿದ್ದೇವೆ. ಮಹಾಪುರುಷರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೇವಸ್ಥಾನಗಳು ನಮ್ಮ ಮನಸ್ಸನ್ನು ಶುದ್ಧ ಮಾಡುವಂತೆ ಮಾಡಬೇಕೆಂದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್. ದೇವಾನಂದ್, ನಾಡಹಬ್ಬಗಳ ಸಮಿತಿಯ ಸದಸ್ಯ ಶ್ರೀಧರ ಉಡುಪ, ಗ್ರಾಮ ಪಂಚಾಯಿತಿ ಸದಸ್ಯ ಶುಭಾಕರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್ ಮತ್ತಿತರಿದ್ದರು.

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಉಮಾಮಹೇಶ್ವರ ದೇವರ ಪ್ರತಿಷ್ಟಾ ಕಾರ್ಯ ನೆರವೇರಿಸಿದರು.

ಉಮಾಮಹೇಶ್ವರ ಸೇವಾ ಸಮಿತಿ ಅಧ್ಯಕ್ಷ ಹನಿಯ ರವಿ ಸ್ವಾಗತಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here