ದೇಶದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಗಳಿಗೆ ಜ್ಞಾನದ ಕೊರತೆಯೇ ಮುಖ್ಯ ಕಾರಣ ; ಕೋಡಿಮಠದ ಶ್ರೀಗಳು

0
381

ಸೊರಬ: ಮತಾಂದತೆಯಿಂದಾಗಿ ಧರ್ಮ ಸಂಘರ್ಷಗಳು ನಡೆಯುತ್ತಿದ್ದು, ನೈಜ ಜ್ಞಾನದ ಕೊರತೆಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಜೀರ್ಣೋದ್ಧಾರವಾಗುತ್ತಿರುವ ಶ್ರೀ ಕುಮಾರ ಕಂಪಿನ ಸಿದ್ಧವೃಷಭೇಂದ್ರ ಕತೃ ಗದ್ದುಗೆಯ ಶಿಲಾಮಯ ಕಟ್ಟಡದ ಕಾಮಗಾರಿ ವೀಕ್ಷಿಸಿ, ಕತೃ ಗದ್ದುಗೆಯ ದರ್ಶನ ಪಡೆದು ಅವರು ಮಾತನಾಡಿದರು.

ದೇಶದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಗಳಿಗೆ ಜ್ಞಾನದ ಕೊರತೆ ಮುಖ್ಯ ಕಾರಣವಾಗಿದೆ. ಇದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಶುಭಕೃತ ನಾಮಸಂವತ್ಸರವು ದೇಶದಲ್ಲಿ ಅಶುಭವನ್ನುಂಟುಮಾಡಲಿದೆ. ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು. ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾಡಿನಲ್ಲಿ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದೆ ಎಂದೆನಿಸುತ್ತದೆ. ಕಾರ್ತಿಕ ಮಾಸದಲ್ಲಿ ಪ್ರಾಕೃತಿ ವಿಕೋಪಗಳು ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಇಬ್ಬಾಗವಾಗುವ ಸಂಭವವಿದೆ. ಹಿಂಗಾರು ಮಳೆ ಕಡಿಮೆಯಾಗಿ ಅಕಾಲಿಕ ಮಳೆಯಾಗಲಿದೆ, ರೋಗ ರುಜಿನಗಳು ಕಾಣಿಸಿಕೊಳ್ಳಲಿವೆ.

ದೇಶದಲ್ಲಿ ಸಾಧು-ಶರಣರಿಗೆ ವಿಶೇಷವಾದ ಸ್ಥಾನ ನೀಡಲಾಗಿದ್ದು, ಜಗತ್ತಿನ ಕಲ್ಯಾಣ ಬಯಸುವುದು ಅವರ ಧರ್ಮವಾಗಿದೆ. ಪವಿತ್ರ ಕ್ಷೇತ್ರವಾದ ಜಡೆ ಸಂಸ್ಥಾನ ಮಠವು ಆಧ್ಯಾತ್ಮದ ನೆಲೆವೀಡಾಗಿದೆ. ಶ್ರೀ ಸಿದ್ಧವೃಷಭೇಂದ್ರದ ಕತೃ ಗದ್ದುಗೆ ಪವಾಡ ಅಪಾರವಾಗಿದ್ದು, ನಿರ್ವಿಕಲ್ಪವಾಗಿ ನೆಲೆಸಿದ್ದಾರೆ. ಶ್ರೀ ಮಹಾಂತ ಸ್ವಾಮೀಜಿಯವರು ಶ್ರೀ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಶ್ರೀಗಳಿಗೆ ದೇಶ ವಿದೇಶಗಳಿಂದಲೂ ಆಹ್ವಾನಗಳು ಬರುತ್ತಿರುವುದು ಸಾಕ್ಷಿಯಾಗಿದೆ. ಮುಂಬರುವ ಏಪ್ರೀಲ್ ತಿಂಗಳಿನಲ್ಲಿ ಅಮೇರಿಕಾದಲ್ಲಿಯೂ ಯೋಗ ತರಬೇತಿ ಮತ್ತು ಪ್ರದರ್ಶನ ನೀಡಲಿದ್ದಾರೆ ಎಂದರು.

ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಗ್ರಾಪಂ ಅಧ್ಯಕ್ಷ ಕೇಶವ ರಾಯ್ಕರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಬಸವರಾಜ ಬಾರಂಗಿ, ಮಲ್ಲಿಕಾರ್ಜುನ ಗುತ್ತೇರ್, ರಾಜುಗೌಡ, ಅಮಿತ್ ಗೌಡ, ಗಂಗಾಧರ, ನಾಗರಾಜಗೌಡ ಸೇರಿದಂತೆ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here