ನಂಬಿಕೆ-ವಿಶ್ವಾಸಗಳಿಂದ ಸಂಬಂಧಗಳು ಬಂಧಗೊಳ್ಳುತ್ತವೆ: ರಂಭಾಪುರಿ ಶ್ರೀ

0
205

ಎನ್.ಆರ್.ಪುರ: ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ, ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ, ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ನಂಬಿಕೆ ವಿಶ್ವಾಸಗಳಿಂದ ಸಂಬಂಧಗಳು ಬಂಧಗೊಳ್ಳುತ್ತವೆ ಎಂದು ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ರಂಭಾಪುರಿ ಪೀಠದಲ್ಲಿ ಜರುಗಿದ ಪೌರ್ಣಿಮಾ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಷ್ಯ ಅನುಭವಿಸುತ್ತಿರುವ ಸಂತೋಷದ ಹಿಂದೆ ಹಿಂದಿನ ಹಿರಿಯರ ಬೆವರು ಮತ್ತು ಆಶೀರ್ವಾದ ಇದೆ ಎಂಬ ಪ್ರಜ್ಞೆಯಿರಬೇಕು. ಗುರಿಯೆಡೆಗೆ ಗಮನ ಇದ್ದರೆ ಬಾಳಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ನೆರವಿಗೆ ನಿಂತವರನ್ನು, ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ದೀಪದಲ್ಲಿ ಬೆಂಕಿ ಮತ್ತು ಬೆಳಕು ಎರಡೂ ಇವೆ. ದೀಪದಲ್ಲಿ ಬೆಳಕು ಕಾಣಬೇಕಲ್ಲದೇ ಬೆಂಕಿ ಕಾಣಬಾರದು. ದೀಪ ಅರುವಿನ ಸಂಕೇತ. ಜ್ಞಾನದ ನಂದಾದೀಪ. ಹೊರಗಿರುವ ಕತ್ತಲೆ ದೀಪದಿಂದ ದೂರ. ಒಳಗಿರುವ ಅಜ್ಞಾನವೆಂಬ ಕತ್ತಲೆ ದೂರ ಮಾಡಲು ಶ್ರೀ ಗುರುವಿನ ಜ್ಞಾನೋಪದೇಶ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯ ಸಂಬಂಧಗಳನ್ನು ಆಧ್ಯಾತ್ಮಿಕತೆಯ ಮೂಲಕ ಸದ್ಭಾವನೆ ಸಾಮರಸ್ಯ ಉಂಟು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶ್ರೀಗಳು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶ್ರೀಗಳು, ಭೇರುಗಂಡಿ ಹಿರೇಮಠದ ರೇಣುಕ ಮಹಾಂತ ಶ್ರೀಗಳು, ರಾಣೆಬೆನ್ನೂರಿನ ಶಿವಯೋಗಿ ಶ್ರೀಗಳು, ಹೇರೂರು ನಂಜುಂಡ ಪಂಡಿತಾರಾಧ್ಯ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಶಾಸಕ ಟಿ.ಡಿ. ರಾಜೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಮ್. ಎಸ್. ಚನ್ನಕೇಶವ, ಎಸ್.ಎಸ್. ರಾಮಲಿಂಗಣ್ಣನವರ ವಕೀಲರು, ಶ್ರೀ ಪೀಠದ ಆಡಳಿತಾಧಿಕಾರಿ ಎಸ್. ಬಿ. ಹಿರೆಮಠ, ಲೆಕ್ಕಾಧಿಕಾರಿ ದಯಾನಂದ ಸಂಕಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹುಬ್ಬಳ್ಳಿ ವೀರೇಶ ಪಾಟೀಲ ವಿದ್ಯುತ್ ದೀಪಾಲಂಕಾರ ಸೇವೆ ಹಾಗೂ ಶಿಗ್ಗಾಂವಿಯ ಲಲಿತಾಬಾಯಿ ಶಿವಪುತ್ರಯ್ಯ ಸುರಗೀಮಠ ಅವರು ತೈಲ ದೀಪಾರಾಧನಾ ಸೇವೆ ಸಲ್ಲಿಸಿದರು. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಜರುಗಿತು.

ಜಾಹಿರಾತು

LEAVE A REPLY

Please enter your comment!
Please enter your name here