ಹೊಸನಗರ: ತಾಲ್ಲೂಕಿನ ನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ.ಜಿ ಇವರು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಎಸ್.ಮೋಹನ ಚಂದ್ರಗುತ್ತಿ ಅವರ ಮಾರ್ಗದರ್ಶನದಲ್ಲಿ “ಮಲೆನಾಡಿನ ಆದಿವಾಸಿ ಸಮುದಾಯಗಳಲ್ಲಿ ಜಲ” (ಹಸಲರು, ಕುಣಬಿಗಳು, ಗೌಳಿಗರು, ಸಿದ್ದಿಗಳು, ಗೊಂಡರನ್ನು ಅನುಲಕ್ಷಿಸಿ) ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಹಿರೇಕಸವಿ ಗ್ರಾಮದ ಶ್ರೀಗಣೇಶಪ್ಪ ಮತ್ತು ಶ್ರೀಮತಿ ಮಲ್ಲಮ್ಮ ದಂಪತಿಗಳ ಪುತ್ರರಾಗಿರುವ ಇವರು ಕವಿಗಳು ಮತ್ತು ವಾಗ್ಮಿಗಳಾಗಿದ್ದು, ‘ಜನಮೆಚ್ಚಿದ ಶಿಕ್ಷಕ’, ‘ಜಿಲ್ಲಾ ಉತ್ತಮ ಶಿಕ್ಷಕ’, ‘ಕನ್ನಡ ರತ್ನ’, ‘ಸಿರಿಗನ್ನಡ ಶ್ರೀಗಂಧ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಶಿಕಾರಿಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಾಲಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್(ರಿ) ಶಿಕಾರಿಪುರ ತಾಲ್ಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇವರ ಶೈಕ್ಷಣಿಕ ಸಾಧನೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.