ನಮ್ಮ ತಂಗಿಯ 09 ಅಂಗಾಂಗಗಳು 09 ಜನ್ರಿಗೆ ಹಾಕ್ತಾರೆ ಅವ್ರೆಲ್ಲಾ ಬದುಕ್ತಾರೆ ಆದ್ರೆ, ಆಕೆಯ ಕಣ್ಣು ಮತ್ತೊಬ್ರ ಮೂಲಕ ಜಗತ್ತನ್ನು ನೋಡಲಿದೆ ಆದ್ರೆ, ನಮ್ಮನ್ನ ನೋಡಲ್ಲ, ಆಕೆಯ ಎದೆಬಡಿತ ಮತ್ತೊಬ್ರಿಗೆ ಕೇಳಿಸ್ತದೆ ಆದ್ರೆ ನಮ್ಗೆ ಕೇಳ್ಸಲ್ಲ ; ರಕ್ಷಿತಾಳ ಸಹೋದರರ ಕಣ್ಣೀರು !

0
913

ಚಿಕ್ಕಮಗಳೂರು: ಮಗಳ ಸಾವಿನ ನೋವಿನಲ್ಲೂ ಹೆತ್ತವರು ಆಕೆಯ ಒಂಬತ್ತು ಅಂಗಾಂಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಪ್ರೇರಣದಾಯಕ ಘಟನೆಗೆ ಜಿಲ್ಲೆಯ ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್ ಹಾಗೂ ಲಕ್ಷ್ಮಿ ದಂಪತಿ ಸಾಕ್ಷಿಯಾಗಿದ್ದಾರೆ.


ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್, ಲಕ್ಷ್ಮಿಬಾಯಿ ದಂಪತಿಯ ಪುತ್ರಿ ರಕ್ಷಿತಾ ನಗರದ ಬೇಲೂರು ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ ಉಳಿದುಕೊಂಡು ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಹುಡುಗಿ,
ಎರಡು ದಿನಗಳ ಹಿಂದೆ ಮನೆಗೆ ಹೋಗಲೆಂದು ಹೋಗುವಾಗ ಧರ್ಮಸ್ಥಳದಿಂದ ಕುಕ್ಕನೂರಿಗೆ (ಕೆಎ 37 ಎಫ್ 0759) ತೆರುಳುತ್ತಿದ ಸರ್ಕಾರಿ ಬಸ್‌ ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕಡೂರಿಗೆ ಹೋಗುವ ಬಸ್ ಹತ್ತಿದ್ದು ಎ ಐ ಟಿ ಸರ್ಕಲ್ ಬರುತ್ತಿದ್ದಂತೆ ತನ್ನ ಅಕ್ಕ ಮೊಬೈಲ್ ಕರೆ ಮಾಡಿದ್ದು “ನಾನು ಕಡೂರಿಗೆ ಬರುತ್ತೇನೆ ನೀನ್ನು ಇಲ್ಲೇ ಎ.ಐ.ಟಿ ಸರ್ಕಲ್ ಬಳಿ ಇಳಿ ಜೊತೆಗೆ ಇನ್ನೊಂದು ಬಸ್ ನಲ್ಲಿ ಹೋಗೋಣ” ಎಂದು ಅಕ್ಕ ಹೇಳಿದ್ದಾಳೆ. ರಕ್ಷಿತಾ ಮೊಬೈಲ್ ನಲ್ಲಿ ಮಾತನಾಡುತ್ತ ಎ.ಐ.ಟಿ ಸರ್ಕಲ್ ಬಸ್ ನಿಲ್ಲಿಸಿದ ಕಾರಣ ಇಳಿಯುತ್ತಿದಂತೆ ಬಸ್ ಮುಂದೆ ಚಲಿಸಿದೆ ಮೊಬೈಲ್ ನಲ್ಲಿ ಮಾತನಾಡುತ್ತಿದ ರಕ್ಷಿತಾ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿತ್ತು.


ತಕ್ಷಣ ಬಸ್ ನಿಲ್ಲಿಸಿ ಬಸ್ ಕಂಡಕ್ಟರ್ ಹನುಮಂತ ಹಾಗೂ ಸಹ ಪ್ರಯಾಣಿಕರು ಹತ್ತಿರದಲ್ಲಿನ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿದಾರೆ. ಆದರೆ ವೈದ್ಯರು ಇಲ್ಲಿ ಆಗುವುದಿಲ್ಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಸೂಚಿಸಿದರು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ರಕ್ಷಿತಾಳನ್ನು ಕರೆತಂದು ವೈದ್ಯರ ಬಳಿ ತೋರಿಸಿದ್ದು ವೈದ್ಯರು ಶಿವಮೊಗ್ಗದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಸೇರಿಸಲು ತಿಳಿಸಿದ್ದಾರೆ. ಶಿವಮೊಗ್ಗದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ರಕ್ಷಿತಾಳ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ಬೇರೆಲ್ಲಾ ಅಂಗಾಂಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆ ಅವುಗಳ ದಾನಕ್ಕೆ ಮುಂದಾಗಬಹುದು ಎಂದು ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನು ಕಳೆದುಕೊಂಡ ನೋವಲ್ಲೂ ಅಪ್ಪ ಶೇಖರ್ ನಾಯ್ಕ್- ಅಮ್ಮ ಲಕ್ಷ್ಮಿ ಬಾಯಿ ರಕ್ಷಿತಾಳ ಎಲ್ಲಾ ಅಂಗಾಂಗಗಳ ದಾನಕ್ಕೆ ಮುಂದಾಗಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


“ನಮ್ಮ ತಂಗಿಯ ಒಂಬತ್ತು ಅಂಗಾಂಗಳನ್ನು ಒಂಬತ್ತು ಜನರಿಗೆ ಹಾಕುತ್ತಾರೆ. ಅವರೆಲ್ಲಾ ಬದುಕುತ್ತಾರೆ. ಆದರೆ, ಆಕೆಯ ಕಣ್ಣು ಮತ್ತೊಬ್ಬರ ಮೂಲಕ ಜಗತ್ತನ್ನು ನೋಡಲಿದೆ. ಆದರೆ, ನಮ್ಮನ್ನ ನೋಡಲ್ಲ. ಆಕೆಯ ಎದೆಬಡಿತ ಮತ್ತೊಬ್ಬರಿಗೆ ಕೇಳಿಸುತ್ತೆ. ಆದರೆ, ನಮಗೆ ಕೇಳಿಸಲ್ಲ” ಎಂದು ರಕ್ಷಿತಾಳ 14 ಜನ ಸಹೋದರರು ಕಣ್ಣೀರಿಟ್ಟಿದ್ದಾರೆ. “ನಮ್ಮ ತಂಗಿ ನಮ್ಮ ಜೊತೆ ಇಲ್ಲ. ಆದರೆ, ಅಂಗಾಂಗಗಳ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗಲಿದ್ದಾಳೆ. ನಾವು ಯಾವುದೇ ತೊಂದರೆ ಮಾಡಲ್ಲ. ಆಕೆಯ ಯಾವ್ಯಾವ ಅಂಗಗಳು ಮತ್ತೊಬ್ಬರಿಗೆ ಉಪಯೋಗಕ್ಕೆ ಬರುತ್ತೋ ಆ ಎಲ್ಲಾ ಅಂಗಗಳನ್ನೂ ತೆಗೆದುಕೊಳ್ಳಲಿ” ಎಂದು ಕಣ್ಣೀರಿಟ್ಟಿದ್ದಾರೆ.


ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾಳ ಅಪ್ಪ-ಅಮ್ಮರದ್ದು ದೊಡ್ಡ ಕುಟುಂಬ. ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು ಸೇರಿದಂತೆ 14 ಜನ ಅಣ್ಣ ತಮ್ಮಂದಿರಿಗೆ ರಕ್ಷಿತಾ ಒಬ್ಬಳೆ ಮುದ್ದಿನ ತಂಗಿ. ಹಾಗಾಗಿ, ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಹೆತ್ತವರು, ಸಹೋದರರೂ ಹೋರಾಡುತ್ತಿದ್ದಾರೆ. ಹಳ್ಳಿಯಲ್ಲಿ ನೂರಾರು ಜನ ಆಕೆಗೆ ಪ್ರಾರ್ಥಿಸಿದ್ದಾರೆ. ಕುಟುಂಬಸ್ಥರು ಮೂರ್ನಾಲ್ಕು ದಿನದಿಂದ ಊಟ-ತಿಂಡಿ-ನಿದ್ದೆ ಬಿಟ್ಟು ಹೋರಾಡುತ್ತಿದ್ದಾರೆ. ಆದರೆ, ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ವೈದ್ಯರು ಉಳಿಯಲು ಸಾಧ್ಯವೇ ಇಲ್ಲ ಎಂದಾಗ ಹೆತ್ತವರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಒಂಬತ್ತು ಅಂಗಗಳ ದಾನ:
ರಕ್ಷಿತಾಳ ಹೃದಯ, ಎರಡು ಕಿಡ್ನಿ, ಎರಡು ಕಣ್ಣುಗಳು, ಎರಡು ಶ್ವಾಸಕೋಶ ಸೇರಿ ಒಟ್ಟು ಒಂಭತ್ತು ಮಂದಿಗೆ ಅಂಗಾಂಗಗಳನ್ನು ಜೋಡಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮೋಹನ್ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಚಿಕ್ಕಮಗಳೂರಿಗೆ ಬೆಂಗಳೂರು, ಚೆನ್ನೈನಿಂದ ನುರಿತ ವೈದ್ಯರ ತಂಡವೂ ಆಗಮಿಸಿ ಇಂದು ಬೆಳಗ್ಗೆ 10.30 ರಿಂದ 12 ಗಂಟೆಯೊಳಗೆ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿರುವ ರಕ್ಷಿತಾಳ ಅಂಗಾಂಗಳನ್ನು ತೆಗೆದಿದ್ದಾರೆ. ಹೆಲಿಕಾಪ್ಟರ್ ಮೂಲಕ ರಕ್ಷಿತಾಳ ಅಂಗಾಂಗಗಳನ್ನು ರವಾನೆಗೆ ಜಿಲ್ಲಾಡಳಿತ ಬಳಸಿಕೊಂಡಿದ್ದು, ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿದ್ದು, ಕಿಡ್ನಿಯನ್ನು ಮಂಗಳೂರಿನ ಯನೋಪೊಯ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಯಿತು.
ಉಳಿದ ಕೆಲವು ಅಂಗಾಂಗಗಳನ್ನು ರಸ್ತೆ ಮೂಲಕ ಚೆನ್ನೈ, ಮಣಿಪಾಲ ಹಾಗೂ ಇತರೆ ಊರಿಗೆ ಸಾಗಿಸಲಾಯಿತು.


ಮಧ್ಯಾಹ್ನ ಎರಡು ಘಂಟೆಗೆ ರಕ್ಷಿತಾ ದೇಹವನ್ನು ನಗರದ ಬಸವನಹಳ್ಳಿ ಸರ್ಕಾರಿ ಶಾಲೆಯ ಬಳಿ ದರ್ಶನಕ್ಕೆ ಇಟ್ಟು ನಂತರ ಸಂಜೆ ನಂತರ ರಕ್ಷಿತಾಳ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಸಾರಿಗೆ ಬಸ್ ನ ಡ್ರೈವರ್ ಮತ್ತು ಕಂಡಕ್ಟರ್ ಅಮಾನತು
ರಕ್ಷಿತಾಳ ಸಾವಿಗೆ ಕಾರಣವಾದ ಕೊಪ್ಪಳ ವಿಭಾಗ ಕಕ್ಕೂರು ಘಟಕದ ಘಟನೆ ನಡೆದ ಧರ್ಮಸ್ಥಳ ಕಕ್ಕೂರು ಬಸ್ ನ ಡೈವರ್ ಜಗದೀಶ್, ಕಂಡಕ್ಟರ್ ಹನುಮಂತ ರವರನ್ನು ಅಮಾನತು ಮಾಡಲು ಕೊಪ್ಪಳ ವಿಭಾಗದ ನಿಯಂತ್ರಣಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಹಾಗೂ ರಕ್ಷಿತಾಳ ಕುಟುಂಬಕ್ಕೆ ಸಾರಿಗೆ ಸಂಸ್ಥೆಯಿಂದ ಮೂರು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ನಿಯಂತ್ರಣಧಿಕಾರಿ ವೀರೇಶ್ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here