ಹೊಸನಗರ: ರಾಷ್ಟ್ರೀಯ ಸ್ವಾಭಿಮಾನ ಪರಿಷತ್, ನಮ್ಮ ಶಿವಮೊಗ್ಗ ಜಿಲ್ಲೆಯ ಪರಿಸರ ಆಸಕ್ತರ ತಂಡ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಪಿಡಿಒ ಮತ್ತು ಗ್ರಾಪಂ ಸದಸ್ಯರಿಗೆ ‘ಭವಿಷ್ಯ ನಿಧಿ ನೀರು ಉಳಿಸೋಣ’ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಏ.10ರ ಶನಿವಾರ ಬೆಳಗ್ಗೆ 9ಕ್ಕೆ ತಾಲ್ಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಹೊಸನಗರ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಸ್ವಾಭಿಮಾನ ಪರಿಷತ್ನ ಅಖಿಲ ಭಾರತ ಸಂಚಾಲಕ ಬಸವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸಲಿರುವರು. ಜಿ.ಪಂ. ಸಿಇಓ ಎಂ.ಎಲ್. ವೈಶಾಲಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ರುದ್ರೇಗೌಡ, ಹರತಾಳು ಹಾಲಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.
ನೀರಿನ ನಿಧಿ ಹೆಚ್ಚಳ ಮತ್ತು ಹಳ್ಳಿಗಳ ಆರ್ಥಿಕತೆ ಪುನರುತ್ಥಾನ ಕುರಿತು ಪದ್ಮಶ್ರೀ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಮಹೇಶ್ ಶರ್ಮ, ಹಾಗೂ ಜನರ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬದಲಾವಣೆ ಕುರಿತು ಏಕ್ತ ಪರಿಷತ್ ಸಂಸ್ಥಾಪಕ ಪಿ.ವಿ. ರಾಜ್ ಗೋಪಾಲ್ ಮತ್ತು ಸ್ವ ಗ್ರಾಮ ಪರಿಕಲ್ಪನೆ ಮತ್ತು ಯಶೋಗಾಥೆ ಕುರಿತು ಸ್ವಗ್ರಾಮ ಸಮಿತಿ ಅಧ್ಯಕ್ಷ ಎಂ.ಆರ್. ಗುರುಮೂರ್ತಿ ಮಾತನಾಡಲಿರುವರು.
ಜಿ.ಪಂ. ಸದಸ್ಯರಾದ ಕೆ.ಈ. ಕಾಂತೇಶ್, ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಸಾಗರ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಹೊಸನಗರ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ, ಪರಿಸರವಾದಿ ಹಾಗೂ ಆರ್ಥಿಕ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ, ಪರಿಸರ ತಜ್ಞ ಪ್ರೊ. ಎ. ಎಸ್. ಚಂದ್ರಶೇಖರ್, ರಾಷ್ಟ್ರೀಯ ಸ್ವಾಭಿಮಾನಿ ಪರಿಷತ್ತಿನ ಸಂಚಾಲಕ ಮಾಧವ ಪುದುವಾಳ್ ಪಾಲ್ಗೊಳ್ಳಲಿರುವರು.
Related