ನಾವು ಸುರಕ್ಷಿತವಾಗಿ ನೆಮ್ಮದಿಯಿಂದ ಇದ್ದೇವೆ ಎಂದರೆ ಪೊಲೀಸರು ಎಚ್ಚರಿಕೆಯಿಂದ ಇದ್ದಾರೆ ಎಂದರ್ಥ: ಸಚಿವ ಆರಗ ಜ್ಞಾನೇಂದ್ರ

0
475

ಸಾಗರ: ನಾವು ಸುರಕ್ಷಿತವಾಗಿ ನೆಮ್ಮದಿಯಿಂದ ಇದ್ದೇವೆ ಎಂದರೆ ಪೊಲೀಸರು ಎಚ್ಚರಿಕೆಯಿಂದ ಇದ್ದಾರೆ ಎಂದರ್ಥ. ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಇರುವ ಕೆಲಸವನ್ನು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇಲ್ಲಿನ ಗಾಂಧಿಮೈದಾನದ ನಗರಸಭೆ ರಂಗಮಂದಿರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಅತ್ಯಂತ ಕಷ್ಟದ ಕೆಲಸ. ಸಂಘಟನೆ ಮತ್ತು ಪಕ್ಷ ನನ್ನ ಮೇಲೆ ಜವಾಬ್ದಾರಿ ಇರಿಸಿ ಖಾತೆ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಡಿಕೆಗೆ ಯಾವುದೇ ಸಮಸ್ಯೆಯಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇನೆ. ಜೊತೆಗೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು, 192ಎ ಕಾಯ್ದೆಗೆ ತಿದ್ದುಪಡಿ ತರುವುದು, ಬಗರ್‌ಹುಕುಂ ಕಾಯ್ದೆಯಡಿ ಹಕ್ಕುಪತ್ರ ಸೇರಿದಂತೆ ಎಲ್ಲ ವರ್ಗದ ಹಿತಾಸಕ್ತಿ ರಕ್ಷಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಾಮಾಜಿಕ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಸಂಘ ಪರಿವಾರ ನಮಗೆ ಹೇಳಿಕೊಟ್ಟಿದೆ. ಶಿಕ್ಷಣ ಸಚಿವನಾಗಿ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ನಡೆಸಲಾಗುತ್ತದೆ ಎಂದರು.

ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್‌ ಮಾತನಾಡಿ, ರಾಜ್ಯಾದ್ಯಂತ ಓಡಾಟ ಮಾಡಿ ಇಂಧನ ಇಲಾಖೆ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಜೊತೆಗೆ ಕಾರ್ಯಕರ್ತರ ಮಂತ್ರಿಯಾಗಲು ನಾನು ಪ್ರಯತ್ನಿಸುತ್ತೇನೆ. ಸೆ.13ರ ನಂತರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಚಿವರಾದ ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್ ಮತ್ತು ಸುನೀಲ್ ಕುಮಾರ್‌ ಹೋರಾಟದ ಮೂಲಕವೇ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದವರು. ಅವರ ಹೋರಾಟಕ್ಕೆ ಪ್ರತಿಫಲವಾಗಿ ಸಂಘಟನೆ ಮತ್ತು ಪಕ್ಷ ಹೊಸ ಹೊಣೆಗಾರಿಕೆ ನೀಡಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಹೋರಾಟದ ಮೂಲಕ ರಾಜಕೀಯ ಪ್ರವೇಶ ಮಾಡಿದ ಮೂವರಿಗೆ ಉತ್ತಮ ಖಾತೆ ಸಿಕ್ಕಿದೆ. ಈ ಪೈಕಿ ಬಿ.ಸಿ.ನಾಗೇಶ್ ಮತ್ತು ಸುನೀಲ್ ಕುಮಾರ್ ನಮ್ಮ ತಾಲ್ಲೂಕಿನ ಅಳಿಯಂದಿರು ಎನ್ನುವುದು ಹೆಮ್ಮೆ ಸಂಗತಿ ಎಂದರು.

ಮಾಜಿ ಶಾಸಕ ಬಿ. ಸ್ವಾಮಿರಾವ್, ಪ್ರಮುಖರಾದ ಲೋಕನಾಥ್ ಬಿಳಿಸಿರಿ, ಗಣೇಶಪ್ರಸಾದ್, ಗಣಪತಿ ಬಿಳಗೋಡು, ಗುರುಮೂರ್ತಿ, ದತ್ತಾತ್ರೇಯ ಎಸ್., ಚೇತನರಾಜ್ ಕಣ್ಣೂರು, ಪ್ರಸನ್ನ ಕೆರೆಕೈ, ಜ್ಯೋತಿ ಪ್ರಕಾಶ್, ಶರಾವತಿ ಸಿ. ರಾವ್, ತುಕಾರಾಮ್ ಡಿ., ವಿ.ಮಹೇಶ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here