ನಿವೇಶನ ಮತ್ತು ಆಶ್ರಯ ಮನೆಗಾಗಿ ಕಾರ್ಮಿಕರ ಪ್ರತಿಭಟನಾ ಧರಣಿ

0
156

ಕಳಸ: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿಯ ಸ್ಥಗಿತದಿಂದ ನಿರಾಶ್ರಿತರಾಗಿ ಬೀದಿಗೆ ಬಿದ್ದಿರುವ ದಿನಗೂಲಿ ಕಾರ್ಮಿಕರಿಗೆ ನಿವೇಶನ ಹಾಗೂ ಆಶ್ರಯ ಮನೆ ಕಲ್ಪಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಆರಂಭಿಸಲಾಗಿರುವ ನಿರಾಶ್ರಿತರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.

ನಾಡಕಚೇರಿ ಆವರಣದಲ್ಲಿ ಗಂಜಿ ಕೇಂದ್ರ ತೆರೆದು ನಿರಾಶ್ರಿತರು ಧರಣಿ ಮುಂದುವರಿಸಿದ್ದು, ಬೇಡಿಕೆ ಈಡೇರದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಮುಖಂಡರಾದ ಲಕ್ಷ್ಮಣ್ ಆಚಾರ್, ಗೋಪಾಲ್ ಶೆಟ್ಟಿ, ರಮೇಶ್ ಕೆಳಗೂರು ಹಾಗೂ ನಿರಾಶ್ರಿತರ ಪುನರ್ವಸತಿ ಹೋರಾಟ ಸಮಿತಿಯ ಅಣ್ಣಪ್ಪ, ನಾಗೇಂದ್ರ, ಸೀನ ಬಾರಿಗ ನೇತೃತ್ವದಲ್ಲಿ ಕಳಸ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಿರಾಶ್ರಿತರು ಬಳಿಕ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಮಂಜೂರಾಗಿರುವ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಕಳಸ ತಾಲೂಕು ಕಚೇರಿ ಅಧಿಕಾರಿಗಳು ಧರಣಿ ನಿರತರನ್ನು ಭೇಟಿಯಾಗಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಧರಣಿ ನಿರತರು ನಿರಾಶ್ರಿತರಿಗೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗದಲ್ಲಿ ಕೂಡಲೇ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here