ತೀರ್ಥಹಳ್ಳಿ: ತಾಲೂಕಿನ ಹಾದಿಗಲ್ಲು ಸಮೀಪ ನೀರು ಕೇಳುವ ನೆಪದಲ್ಲಿ ಇಬ್ಬರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಸರ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಗುರುವಾರ ಸಂಜೆ ಹಾದಿಗಲ್ಲು ಗ್ರಾಪಂ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ದಾಪುರದಲ್ಲಿ ದಿ|| ಲಕ್ಷ್ಮಣ್ ರವರ ಮನೆಯಲ್ಲಿ ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ ಕುತ್ತಿಗೆಯಲ್ಲಿದ್ದ ಸರ ಕಸಿದು ಅಪರಿಚಿತರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಓರ್ವ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಾರಿನಲ್ಲಿ ಬಂದಿದ್ದ ಇಬ್ಬರು ಯುವಕರು ಈ ಭಾಗದಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯು ಮನೆಯಲ್ಲಿ ಒಬ್ಬರೇ ಇರುವುದನ್ನ ಗಮನಿಸಿದ ಯುವಕರು, ಆಕೆಗೆ ಕುಡಿಯಲು ನೀರು ಕೇಳಿದ್ದಾರೆ. ನೀರು ತರುತ್ತಿದ್ದಂತೆ ಒಬ್ಬ ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಎಳೆದಿದ್ದಾನೆ. ಇನ್ನೊಬ್ಬ ಎಸ್ಕೇಪ್ ಆಗಲು ಕಾರಿನಲ್ಲಿ ಕುಳಿತಿದ್ದ. ಅಷ್ಟೊತ್ತಿಗೆ ಆಕೆ ಕಿರುಚಿದ್ದರಿಂದ ಅಕ್ಕಪಕ್ಕದವರೆಲ್ಲಾ ಓಡಿ ಬಂದಿದ್ದಾರೆ. ಇದನ್ನ ಗಮನಿಸಿದ ಆರೋಪಿ ಅಲ್ಲಿಂದ ಓಡಿಹೋಗಿದ್ಧಾನೆ. ಆದರೆ ಕಾರಿನಲ್ಲಿದ್ದ ಯುವಕ ಓಡಲಾಗದೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇನ್ನೂ ಕಾರು ಕೋಣಂದೂರು ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಯಾವ ಕಾರಣಕ್ಕಾಗಿ ಕಾರನ್ನು ಆರೋಪಿಗಳು ತಂದಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.