ನೂತನ ಗೋಶಾಲೆ ನಿರ್ಮಾಣಕ್ಕೆ ಅಡಿಗಲ್ಲು | ಗೋವುಗಳ ಜೊತೆಗಿನ ಅವಿನಾಭಾವ ಸಂಬಂಧ ಭಾರತೀಯರದ್ದು ; ಸಚಿವ ಆರಗ ಜ್ಞಾನೇಂದ್ರ

0
368

ಹೊಸನಗರ: ಗೋವುಗಳ ಭಾರತೀಯ ಸಂಸ್ಖೃತಿಯ ಅವಿಭಾಜ್ಯ ಅಂಗವಾಗಿದೆ. ಅವುಗಳ ಜೊತೆಗಿನ ಅವಿನಾಭಾವ ಸಂಬಂಧ ಎಂದಿಗೂ ಮರೆಯಲು ಸಾಧ್ಯವಿಲ್ಲ. ಗೋವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ನೂತನವಾಗಿ ನಿರ್ಮಾಣವಾಗಲಿರುವ ಗೋಶಾಲೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಗೋವುಗಳ ಹತ್ಯೆ ತಡೆಯಲು ಸರಕಾರ ಕಾನೂನು ರೂಪಿಸಿದೆ. ಕೆಲವರು ಗೋವುಗಳ ಹತ್ಯೆಯನ್ನು ಬೆಂಬಲಿಸುತ್ತಾರೆ. ಆದರೆ ಭಾರತೀಯರು ಗೋವುಗಳನ್ನು ದೈವಸ್ವರೂಪಿಯಾಗಿ ಕಾಣುತ್ತಾರೆಯೇ ಹೊರತು ಮಾಂಸಕ್ಕಾಗಿ ಸಾಕುವುದಿಲ್ಲ. ಇದನ್ನು ಗಮನಿಸಬೇಕು ಎಂದರು.

70 ದಶಕಗಳ ಹಿಂದೆ ದೇಶದಲ್ಲಿ ಸುಮಾರು 43 ಕೋಟಿ ಗೋವುಗಳು ಇದ್ದವು. ಇಂದು ಕೇವಲ ಹತ್ತು ಕೋಟಿಯ ಆಸುಪಾಸಿನಲ್ಲಿದೆ. ಜಾನುವಾರುಗಳ ಗೊಬ್ಬರ ಬಳಸಿ ಕೃಷಿ ಮಾಡಿ ಆರೋಗ್ಯವಂತರಾಗಿದ್ದೆವು. ಆದರೆ ಇಂದು ವಿದೇಶದಿಂದ ಆಮದು ಮಾಡಿದ ರಾಸಾಯನಿಕ ಗೊಬ್ಬರ, ಬೀಜ ಬಳಸಿ ರೋಗಗ್ರಸ್ತರಾಗುತ್ತಿದ್ದೇವೆ. ಮತ್ತೊಮ್ಮೆ ಸಾವಯವ ಕೃಷಿಯತ್ತ ಮರಳುವುದಕ್ಕೆ ಇದು ಸುಸಮಯ. ಈ ಮೂಲಕ ಗೋವುಗಳ ಸಾಕಾಣಿಕೆಗೆ ಮತ್ತೊಮ್ಮೆ ಚಾಲನೆ ದೊರೆಯಬೇಕಿದೆ ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಗೋವುಗಳ ಪ್ರತಿ ಅಂಗಕ್ಕೂ ಹಿಂದೂ ಸಂಸ್ಕೃತಿಯಲ್ಲಿ ವಿಶೇಷ ಅರ್ಥವಿದೆ. ಅವುಗಳನ್ನು ಪೂಜಿಸಿ, ಆರಾಧಿಸಿ, ತಾಯಿಯ ಸ್ಥಾನದಲ್ಲಿ ನೋಡಿ ಸಂತಸ ಪಡುತ್ತಿದ್ದೆವು. ಆದರೆ ಇಂದು ಗೋವುಗಳನ್ನು ಸಾಕುವವರ ಸಂಖ್ಯೆ ಇಳಿಮುಖವಾಗಿದೆ. ಗೋವುಗಳ, ಸಾಕುವಲ್ಲಿ ಆಗುತ್ತಿರುವ ಸಮಸ್ಯೆಗಳಿಂದ ಜನಸಾಮಾನ್ಯರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಜಾನುವಾರು ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡುವುದು ಸವಾಲಿನ ಕೆಲಸ ಎನ್ನುವಂತಾಗಿದೆ. ಜಾಗತೀಕರಣಕ್ಕೆ ತೆರೆದುಕೊಂಡಿರುವ ಪರಿಣಾಮವಾಗಿ ಪರಿಸ್ಥಿತಿಗಳು ಬದಲಾಗಿವೆ. ಗೋವುಗಳು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಸದ್ಯ ಜಿಲ್ಲೆಗೊಂದು ಗೋಶಾಲೆ ಎನ್ನುವ ಯೋಜನೆ ಜಾರಿಗೊಂಡಿದೆ. ಬರುವ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದು ಗೋಶಾಲೆ ತೆರೆಯುವ ಚಿಂತನೆ ಸರಕಾರಕ್ಕಿದೆ. ಗೋವು ಹಾಗೂ ಭಾರತೀಯರ ಸಂಬಂಧ ಅವಿನಾಭಾವದಿಂದ ಕೂಡಿದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಶಿವಯೋಗಿ ಏಲಿ, ಸಾಗರ ಉಪವಿಭಾಗಾಧಿಕಾರಿ ಡಾ.ನಾಗರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪಶು ಇಲಾಖೆಯ ಸಹಾಯಕ ನಿರ್ದೆಶಕ ಡಾ|| ನಾಗರಾಜ್, ಪಶು ಇಲಾಖೆಯ ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್, ಉಪಾಧ್ಯಕ್ಷೆ ಚಂದ್ರಕಲಾ, ಮಂಡಾಣಿ ಮೋಹನ್, ಮತ್ತಿತರರು ಇದ್ದರು.

ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಸ್ವಾಗತಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here