ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಲಾಗುವುದು ; ಆರಗ ಜ್ಞಾನೇಂದ್ರ

0
179

ಶಿವಮೊಗ್ಗ: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ,

ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮವಾಗಿರುವುದು ನಿಜ. ಅವ್ಯವಹಾರಗಳನ್ನು ಕಂಡುಹಿಡಿಯಲು ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಮರುಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹಾಗಾಗಿಯೇ ಸದ್ಯದರಲ್ಲಿಯೇ ಮರುಪರೀಕ್ಷೆಯನ್ನು ನಡೆಸಲಾಗುವುದು. ಈ ಹಿಂದೆ ಪರೀಕ್ಷೆ ಬರೆದವರು ಮಾತ್ರ ಅರ್ಹರಾಗಿರುತ್ತಾರೆ. ಅಕ್ರಮದಲ್ಲಿ ಭಾಗಿಯಾದವರನ್ನು ಪರೀಕ್ಷೆಯಿಂದ ಹೊರಗಿಡಲಾಗುವುದು. ಇದರಿಂದಾಗಿ ಹಿಂದಿನ ಪರೀಕ್ಷೆಯಲ್ಲಿ ಅವಕಾಶ ವಂಚಿತರಾದವರಿಗೆ ಅನುಕೂಲವಾಗಲಿದೆ ಎಂದರು.

ಈ ನೇಮಕಾತಿ ಅಕ್ರಮ ಸರ್ಕಾರದ ಕಣ್ಣು ತೆರೆಸಿದೆ. ಹೊಸ ತಂತ್ರಜ್ಞಾನವನ್ನು ಬಳಸಲಾಗಿದೆ. ಇದಕ್ಕೆ ತಕ್ಕಂತೆ ಪರೀಕ್ಷಾ ಪದ್ಧತಿಯನ್ನು ಬದಲಾಯಿಸಲಾಗುವುದು. ಅವ್ಯವಹಾರ ತಡೆಯಲು ಸರ್ಕಾರ ಎಲ್ಲರೀತಿಯ ಕ್ರಮ ತೆಗೆದುಕೊಳ್ಳಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದವರು ಜೈಲಿನಿಂದಲೇ ಹೊರ ಬಾರದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದರು.

ನನ್ನನ್ನು ಅರೆಸ್ಟ್ ಮಾಡಿ ಎಂದ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿದ್ರೂ ಬಂದಿಲ್ಲ. ಅವರ ಬಳಿ ಸಾಕ್ಷಿಗಳಿದ್ದರೆ ಸಿಐಡಿಗೆ ನೀಡಲಿ, ಮೀಡಿಯಾ ಮುಂದೆ ಅಲ್ಲ. ಅದನ್ನು ಬಿಟ್ಪು ಕೇವಲ ಈ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ದಾಖಲೆಗಳನ್ನು ತನಿಖಾಧಿಕಾರಿಯ ಮುಂದೆ ಕೊಡದೇ ಪಲಾಯನ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಲಾಭ ಬೇಕು, ಪ್ರಾಮಾಣಿಕ ತನಿಖೆ ಬೇಡವಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮವಾಗಿದೆ ಎಂದು ನಾವೇ ಒಪ್ಪಿಕೊಂಡಿದ್ದೇವೆ. ದಾಖಲೆ ಸಿಕ್ಕ ಎರಡು ಗಂಟೆಯಲ್ಲಿ ನಾನೇ ಸಿಒಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here