ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಲು ಅವಧಿ ವಿಸ್ತರಣೆ : ಸಿ.ಎಸ್.ಷಡಾಕ್ಷರಿ

0
398

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ರಾಜ್ಯ ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡಿ ಆದೇಶ ಹೊರಡಿಸಿದ್ದು, ಅರ್ಹ ರಾಜ್ಯ ಸರ್ಕಾರಿ ನೌಕರರು ಈ ಅವಧಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಿಯಮಾನುಸಾರ ಇಲಾಖಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.

ಅವರು ಇಂದು ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿಂದಿನ ಆದೇಶದ ಪ್ರಕಾರ ರಾಜ್ಯ ಸರ್ಕಾರಿ ನೌಕರರು ಪ್ರಸಕ್ತ ಮಾಹೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಬೇಕಾಗಿತ್ತು. ಈ ಅವಧಿಯನ್ನು ಸರ್ಕಾರ ವಿಸ್ತರಿಸಿ 2022ರ ಡಿಸೆಂಬರ್ ಮಾಸಾಂತ್ಯದವರೆಗೂ ವಿಸ್ತರಿಸಿ ಕಾಲಾವಕಾಶ ನೀಡಿದೆ. ಇದರಿಂದಾಗಿ ಈವರೆಗೆ ಕಂಪ್ಯೂಟರ್ ಪರೀಕ್ಷೆ ಉತ್ತೀರ್ಣರಾಗದಿರುವ ನೌಕರರಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ ಎಂದವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರು ವೇತನ ಬಡ್ತಿ, ಪದೋನ್ನತಿ, ಪ್ರೋಬೇಷನರಿ ಅವಧಿ ಘೋಷಣೆ ಸೇರಿದಂತೆ ಅನೇಕ ಸವಲತ್ತುಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಬೇಕಾದ್ದು ಕಡ್ಡಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನ, ಪ್ರಕೃತಿ ವಿಕೋಪ ಮುಂತಾದ ಕಾರಣಗಳಿಂದಾಗಿ ನೌಕರರು ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ, ನಮ್ಮ ಬೇಡಿಕೆಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಅವಧಿ ವಿಸ್ತಿರಿಸಿದೆ. ಅದಕ್ಕಾಗಿ ಸಂಘವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ ಎಂದವರು ತಿಳಿಸಿದ್ದಾರೆ.

ಪ್ರಶಸ್ತಿಗಳ ಸಂಖ್ಯೆ ಹೆಚ್ಚಳ :

ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳ ಸಂಖ್ಯೆಯನ್ನು 10ರಿಂದ 30ಕ್ಕೆ ಹೆಚ್ಚಿಸಿದೆ ಅಲ್ಲದೇ ಜಿಲ್ಲಾ ಮಟ್ಟದ ಪ್ರಶಸ್ತಿಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದವರು ತಿಳಿಸಿದ್ದಾರೆ.

ರಾಜ್ಯ ಮಟ್ಟದ ಪ್ರಶಸ್ತಿಯು ರೂ.25,000/-ಗಳ ನಗದು ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯು ರೂ.10,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಗಾಗಿ ಸರ್ಕಾರವು ಈಗಾಗಲೇ ಅನುದಾನ ಬಿಡುಗಡೆಗೊಳಿಸಿದೆ ಎಂದು ತಿಳಿಸಿರುವ ಅವರು, ಈ ಪ್ರಶಸ್ತಿಗಳನ್ನು ಏಪ್ರಿಲ್ 21ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ.

ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ, ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕತೆ, ನಾಗರಿಕಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿದ ಎ.ಬಿ.ಸಿ. ಮತ್ತು ಡಿ. ವೃಂದದ ಎಲ್ಲಾ ಖಾಯಂ ನೌಕರರು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ ಎಂದವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಆನ್‍ಲೈನ್ ಮೂಲಕ ಸಾಲಸೌಲಭ್ಯ, ಬೋನಸ್, ಹೊಸ ಪಾಲಿಸಿ ವಿತರಣೆ, ವಿತರಣೆ ಹಾಗೂ ಅಂತಿಮ ಕ್ಲೈಮುಗಳನ್ನು ಪಾವತಿಸುವ ವಿಧಾನವನ್ನು ಜಾರಿಗೊಳಿಸುವಂತೆ ಖಜಾನೆ ಆಯುಕ್ತ ಹಾಗೂ ಗಣಕೀಕರಣದ ನೋಡಲ್ ಅಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರಿಗೆ ಮನವಿ ಮಾಡಲಾಗಿದ್ದು, ನಿಗಧಿತ ಕಾಲಾವಧಿಯಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ.

ಈ ಸಂಬಂಧ ಈಗಾಗಲೇ ಇ-ಗೌರ್ನೆನ್ಸ್ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಕೆ.ಜಿ.ಐ.ಡಿ ಇಲಾಖೆಯ ಗಣಕೀಕರಣ ಕಾರ್ಯಕ್ಕೆ ಪೂರಕವಾಗಿ ಸಿ.ಎಸ್.ಜಿ. ಸಂಸ್ಥೆಯವರು ಸಾಫ್ಟ್‍ವೇರ್ ಅಭಿವೃದ್ಧಿಪಡಿಸಿ, ಅವಶ್ಯಕ ಸೌಲಭ್ಯಗಳನ್ನು ಕಾಲಮಿತಿಯೊಳಗಾಗಿ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here