23.2 C
Shimoga
Sunday, November 27, 2022

ನ. 09ರಂದು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ; ಸಂವಾದ ಕಾರ್ಯಕ್ರಮ


ಶಿವಮೊಗ್ಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಜಿಲ್ಲಾ ಚುನಾವಣಾ ಶಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 09ರಂದು ಬೆಳಿಗ್ಗೆ 11 ರಿಂದ 12.30ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಎಂಬ ವಿಷಯದ ಕುರಿತು ಜನಾಭಿಪ್ರಾಯ ಸಂಗ್ರಹ, ಯುವ ಮತದಾರರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸ್ವಾತಂತ್ರ್ಯಾ ನಂತರ ಹಲವು ದಶಕಗಳು ಉರುಳಿದರೂ ಭಾರತದಲ್ಲಿ, ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಗಳು ನಡೆಯುತ್ತಿರುವ ರೀತಿ, ಅದರ ಮೌಲ್ಯ ಹಾಗೂ ಅದರ ಸಾಧಕ-ಬಾದಕಗಳ ಕುರಿತು ಚರ್ಚಿಸುವ ಅಗತ್ಯವಿರುವುದನ್ನು ಮನಗಂಡಿರುವ ವಿಧಾನಸಭಾಧ್ಯಕ್ಷರು ಈ ಕಾರ್ಯಕ್ರಮದ ಆಯೋಜನೆಗೆ ಕ್ರಮ ವಹಿಸಿದ್ದಾರೆ ಎಂದರು.


ಈ ಅವಧಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿನ ಲೋಪಗಳ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವುದು, ಚುನಾವಣಾ ಸಾಕ್ಷರತಾ ಕ್ಲಬ್, ಸಂಘಗಳನ್ನು ಸ್ಥಾಪಿಸುವುದು. ಅಲ್ಲದೇ ಯುವಜನತೆಯ ಸಾಮೂಹಿಕ ಪಾಲ್ಗೊಳ್ಳುವಿಕೆ, ನಿರ್ವಹಿಸಬೇಕಾದ ಕರ್ತವ್ಯ, ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವಲ್ಲಿ ಹಾಗೂ ದೇಶದ ಭವಿಷ್ಯದ ಆಸ್ತಿಗಳಾಗಿರುವ ಯುವಜನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಿ ಪರಿವರ್ತನೆಗೊಳಿಸುವಲ್ಲಿ ಈ ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದವರು ತಿಳಿಸಿದ್ದಾರೆ.


ಈ ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವ ಮತದಾರರು, ಕಾಲೇಜು ವಿದ್ಯಾರ್ಥಿಗಳು, ವಕೀಲರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು, ಅರ್ಹ ಮತದಾರರು, ಆಸಕ್ತರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ.


ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜಿ.ಅನುರಾಧ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!