ಪಂಜಾಬ್ ದಲಿತ ಸಿ.ಎಂ ಆಯ್ಕೆ | ಜಾತ್ಯಾತೀತ ನಿಲುವು ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್: ಡಾ. ಅಂಶುಮಂತ್

0
260

ಚಿಕ್ಕಮಗಳೂರು: ಕಾಂಗ್ರೆಸ್ ಜಾತ್ಯಾತೀತ ನಿಲುವನ್ನು ಹೊಂದಿರುವ ಪಕ್ಷವಾಗಿದೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಆಶಯದಂತೆ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಕೆ.ಪಿ. ಅಂಶುಮಂತ್ ಹೇಳಿದರು.

ಅವರು ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪಂಜಾಬ್ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ದಲಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚರಣಚಿತ್ ಸಿಂಗ್ ಚನ್ನಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಸೈದ್ದಾಂತಿಕ ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಎಲ್ಲಾ ವರ್ಗದ ಜನರಿಗೆ ಅಧಿಕಾರ ನಿರ್ವಹಿಸುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಮ ಸ್ವರಾಜ್ಯ ಅಡಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಬಿಜೆಪಿ ಪಕ್ಷವು ಮಹಿಳೆಯರಿಗೆ ಮತ್ತು ದಲಿತರಿಗೆ ಶೋಷಣೆ ಮಾಡುತ್ತಾ ಬರುತ್ತಿದೆ. ಶಾಸಕ ಸಿ.ಟಿ. ರವಿ ಹಾಗೂ ಆರ್.ಎಸ್.ಎಸ್ ಮನಸ್ಥಿತಿ ಒಂದೇ ಆಗಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಶಾಸಕರಿಗೆ ಜನರು ಬುದ್ದಿ ಕಲಿಸುವ ಸಮಯ ಬಂದೊದಗಿದೆ. ಬಿಜೆಪಿ ಆಡಳಿತದ ವೈಫಲ್ಯವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಬೇಕು ಎಂದು ಹೇಳಿದರು.

ಸತತ 8 ವರ್ಷಗಳ ಕಾಲ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ಮನದಲ್ಲಿ ಉಳಿದಿದ್ದಾರೆ. ಅವರು ಮಾಡಿರುವ ಅಬಿವೃದ್ಧಿ ಕೆಲಸಗಳನ್ನು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಕೈಗೊಂಡಿರುವ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ದುರುಪಯೋಗಪಡಿಸಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಬಂಧು ಬಳಗ ಎಲ್ಲವನ್ನು ಸಂಬಂಧದಲ್ಲಿಟ್ಟುಕೊಂಡು ಕೆಲಸ ಮಾಡಿದಲ್ಲಿ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಸಾವಿರಾರು ಜಾತಿ, ಭಾಷೆಗಳು ಇವೆ. ಯಾವುದೇ ಜನಾಂಗಕ್ಕೆ ಶೋಷಣೆ, ಜಾತಿಬೇಧ, ಮೇಲು ಕೀಳು ಎಂಬ ಕೀಳರಿಮೆ ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಬಾಳಬೇಕಾಗಿದೆ. ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿ, ಸಮಾಜದಲ್ಲಿ ಎಲ್ಲರೂ ಉತ್ತಮ ಬಾಂಧವ್ಯ, ಸೌಹಾರ್ದತೆಯನ್ನು ಮೈಗೂಡಿಸಿಕೊಳ್ಳುವಂತೆ ಮನವಿ ಮಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here