24.3 C
Shimoga
Friday, December 9, 2022

ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಕುರಿತು ಸ್ಪಷ್ಟೀಕರಣ


ಶಿವಮೊಗ್ಗ : ಭೂಪರಿವರ್ತನೆಯಾದ ಜಾಗದಲ್ಲಿ ನಿವೇಶನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೇ ಇರುವುದರಿಂದ ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ದಂಪತಿಗಳು ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವ ಸಂಬಂಧ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದ ಸುದ್ದಿಯ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಎನ್.ಡಿ. ಪ್ರಕಾಶ್ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಿದ್ದಾರೆ.


ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಖಂಡಿಕಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ವೆ ಗ್ರಾಮದ ಸರ್ವೆ ನಂಬರ್ 136/1 ರಲ್ಲಿ ತಮಗೆ ಸೇರಿದ ಭೂಪರಿವರ್ತನೆಯಾದ ಜಾಗದಲ್ಲಿ 61% ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೇ ಇರುವುದರಿಂದ ಶ್ರೀಕಾಂತನಾಯ್ಕ ಹಾಗೂ ಸುಜಾತಾನಾಯ್ಕ ರವರು ದಯಾಮರಣ ಕೋರಿ ಸಾಗರ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿರುವುದಾಗಿ ದಿನಾಂಕ:10-11-2022 ರಂದು ವಿವಿಧ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು ಈ ಬಗ್ಗೆ ಖಂಡಿಕಾ ಗ್ರಾಮ ಪಂಚಾಯಿತಿಯಿಂದ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಪಡೆದು ಕೂಲಂಕುಷವಾಗಿ ಪರಿಶೀಲಿಸಲಾಗಿರುತ್ತದೆ‌.


ಈ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಕಾನೂನು ಸಲಹೆ ಪಡೆಯಲಾಗಿದ್ದು, ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂತಿಮ ಆದೇಶದವರೆಗೆ ಅಥವಾ ನಿವೇಶನಗಳ ಹಂಚಿಕೆ ಕರಾರುಪತ್ರ ಸಲ್ಲಿಸುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸ್ವತ್ತಿನ ಮಾಲೀಕರಾದ ಶ್ರೀಕಾಂತನಾಯ್ಕ ಬಿನ್ ರಾಮಚಂದ್ರನಾಯ್ಕ ಇವರಿಗೆ ನಿವೇಶನ ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಿರುವುದಿಲ್ಲವೆಂದು ವಕೀಲರು ಕಾನೂನು ಸಲಹೆಯನ್ನು ನೀಡಿರುತ್ತಾರೆ. ಸ್ವತ್ತಿನ ಮಾಲೀಕರಾದ ಶ್ರೀಕಾಂತನಾಯ್ಕ ಬಿನ್ ರಾಮಚಂದ್ರನಾಯ್ಕ ಹಾಗೂ ಮ್ಯಾನೇಜಿಂಗ್ ಪಾರ್ಟ್‍ನರ್ ಆದ ಎಸ್.ಚಂದ್ರಶೇಖರ್ ನಡುವೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯಗಳಿಂದಾಗಿ ಈ ಹಂತದಲ್ಲಿ ನಿವೇಶನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ.


ಮೇಲ್ಕಂಡ ವಾಸ್ತವಾಂಶಗಳನ್ನು ಮರೆಮಾಚಿ ಸ್ವತ್ತಿನ ಮಾಲೀಕರಾದ ಶ್ರೀಕಾಂತನಾಯ್ಕ ಬಿನ್ ರಾಮಚಂದ್ರನಾಯ್ಕ ರವರು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಸಾಗರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್, ಖಂಡಿಕಾ ಇವರ ಮೇಲೆ ಅನಗತ್ಯ ಒತ್ತಡ ಹೇರುವ ಸಲುವಾಗಿ ವೃತಾ ಲಂಚದ ಆರೋಪ ಮಾಡಿರುತ್ತಾರೆ. ಇದು ಸತ್ಯಕ್ಕೆ ದೂರವಾಗಿರುತ್ತದೆ. ಆದ್ದರಿಂದ ದಿನಾಂಕ: 10-11-2022 ರಂದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಅವರು ಸ್ಪಷ್ಟೀಕರಣ ನೀಡಿರುತ್ತಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!