ಪದ್ಮಾಂಬಾ ಪ್ರೌಢಶಾಲೆಯಲ್ಲಿ ನಡೆದ ನವೋದಯ ಶಾಲೆ – ಉಚಿತ ತರಬೇತಿ ಶಿಬಿರ

0
377

ರಿಪ್ಪನ್‌ಪೇಟೆ: ಹುಂಚ ಗ್ರಾಮದ ಶ್ರೀ ರಂಗರಾವ್ ಸ್ಮಾರಕ ಸಭಾಭವನ, ಶ್ರೀ ಪದ್ಮಾಂಬಾ ಪ್ರೌಢಶಾಲೆಯಲ್ಲಿ ನವೋದಯ ಶಾಲೆ – ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಭಾಗವಾಗಿ “ಪೋಷಕರ ಸಭೆ ಮತ್ತು ಸಂವಾದ” ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ಹುಂಚ ಗ್ರಾಮ ವ್ಯಾಪ್ತಿಯ, 8 ವಿವಿಧ ಶಾಲೆಗಳಿಂದ, 5ನೇ ತರಗತಿಯಲ್ಲಿ ಓದುತ್ತಿರುವ, ನವೋದಯ ಪ್ರವೇಶ ಪರೀಕ್ಷೆ ಕಟ್ಟಿರುವ 21 ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ಲೇಖಕರು ನವೋದಯ ಮಾಸ್ಟರ್ ಗೈಡ್ ಮತ್ತು ಉಪನ್ಯಾಸಕರಾದ ಬಿ ಪ್ರಕಾಶ್ ಶಿವಮೊಗ್ಗ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ಮಹತ್ವ ಹಾಗೆ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಎಲ್ಲರಿಗೂ ವಿವರಿಸಿದರು. ನವೋದಯ ಪ್ರವೇಶಕ್ಕೆ ಪರೀಕ್ಷಾ ಪೂರ್ವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ನವೋದಯ ಪರೀಕ್ಷಾ ಸಲಹೆ ಮತ್ತು ಸೂಚನೆಗಳು ವಿವರವಾಗಿ ತಿಳಿಸಿದರು. ಈ ಉಚಿತ ತರಬೇತಿಯ ಸದುಪಯೋಗ ಮಾಡಿಕೊಂಡು, ಗುರುದಕ್ಷಿಣೆಯಾಗಿ, ನವೋದಯಕ್ಕೆ ತೇರ್ಗಡೆಯಾಗಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು.

ಈ ಶಿಬಿರದ ರೂವಾರಿಯಾದ ಪ್ರಕಾಶ್ ಜೋಯಿಸ್ ಮಾತನಾಡಿ, “ನವೋದಯ” ಎಂದರೆ ನಿಮ್ಮ ಕನಸುಗಳನ್ನು ನನಸು ಮಾಡುವ ಒಂದು ಸುವರ್ಣ ಅವಕಾಶ. ನನಗೆ ಹೆಮ್ಮೆ ಇದೆ, ನಾನು ಗಾಜನೂರಿನ ನವೋದಯ ಶಾಲೆಯ ವಿದ್ಯಾರ್ಥಿ ಎನ್ನುವುದಕ್ಕೆ ನಮ್ಮ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುಂಚ ಗ್ರಾಪಂ ಉಪಾಧ್ಯಕ್ಷ ದೇವೇಂದ್ರ ಜೈನ್ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವ ಕೆಲಸ ಆಗಬೇಕಿದೆ, ಕೋವಿಡ್ ಪರಿಸ್ಥಿತಿ ಇಂದ ಕೆಲವು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಇಂತಹ ಶಿಬಿರಗಳಿಂದ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ರಾಷ್ಟ್ರೀಯ ವಿದ್ಯಾ ಸಂಸ್ಥೆ ಕೋಣಂದೂರು ಮುಖ್ಯ ಶಿಕ್ಷಕ ಸಂತೋಷ್ ಮಾತನಾಡಿ, “ನಮ್ಮ ಧ್ಯೇಯ – ಉತ್ತಮ ಶಿಕ್ಷಣಕ್ಕೆ ಅಡಿಪಾಯ”. ನಮ್ಮ ಊರಿನ ಮಕ್ಕಳು, ಉತ್ತಮ ಶಿಕ್ಷಣ ಪಡೆಯಬೇಕು, ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಮಾದರಿ ನಾಗರಿಕ ಆಗುವಂತೆ ಬದುಕಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕರಾದ ಅಭಿಷೇಕ್, ಪ್ರಶಾಂತ್ ಶಿಕ್ಷಕರು, ದಿನೇಶ್ ಶಿಕ್ಷಕರು, ಆದಿತ್ಯ ಶಿಕ್ಷಕರು, ಸಿಂಧು (ಹಳೆ ನವೋದಯ ವಿದ್ಯಾರ್ಥಿ) ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಜಗತ್ತಿಗೆ ತಮ್ಮ 32 ವರುಷಗಳ ಕೊಡುಗೆ ಕೊಟ್ಟಂತಹ, ನವೋದಯ ಮಾಸ್ಟರ್ ಗೈಡ್ ಖ್ಯಾತಿಯ ಬಿ. ಪ್ರಕಾಶ್ ಅವರಿಗೆ ಶಿಬಿರದ ವತಿಯಿಂದ ಸನ್ಮಾನಿಸಲಾಯಿತು.

ನವೋದಯ ಪ್ರವೇಶ ಪರೀಕ್ಷೆ ಈ ತಿಂಗಳ 30ರಂದು ನಡೆಯಲಿದ್ದು, ಶಿಬಿರಾರ್ಥಿಗಳು ಉತ್ತಮ ತಯ್ಯಾರಿ ನಡೆಸಿದ್ದಾರೆ. ಈ ಶಿಬಿರ ಜನವರಿ 16 ರಿಂದ ಏಪ್ರಿಲ್ 29ರ ವರೆಗೆ ಇದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಪರೀಕ್ಷೆ ಕಟ್ಟಿದ ಮಕ್ಕಳಿಗೆ ಉಚಿತ ಕೋಚಿಂಗ್ ಕೊಡಲಾಗುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here