ಚಿಕ್ಕಮಗಳೂರು: ಪರಿಶಿಷ್ಟರ ಒತ್ತುವರಿ ಅರ್ಜಿ ಸಕ್ರಮಗೊಳಿಸಿದ ಬಳಿಕ ಬೆಳೆಗಾರರ ಒತ್ತುವರಿ ಭೂಮಿ ಗುತ್ತಿಗೆ ನೀತಿ ಜಾರಿಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ ಬಣ) ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಒತ್ತಾಯಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ. ವಸಂತ್ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಒತ್ತುವರಿ ಮಾಡಿರುವ ಭೂಮಿಯನ್ನು ಬಿಡಿಸಿ ಭೂರಹಿತರಿಗೆ, ಬಡವರಿಗೆ ನೀಡುವಂತೆ ಕಳೆದ 45 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ. ಆದರೆ ಈ ಬಗ್ಗೆ ಕಿಂಚಿತ್ತೂ ಗಮನಹರಿಸದ ಸರ್ಕಾರ ಇದೀಗ ಶ್ರೀಮಂತರು ಒತ್ತುವರಿ ಮಾಡಿರುವ ಭೂಮಿಯನ್ನು ಗುತ್ತಿಗೆ ನೀಡುವುದಾಗಿ ತೀರ್ಮಾನಿಸಿದೆ, ಈ ನೀತಿ ಒತ್ತುವರಿ ಮಾಡುವವರಿಗೆ ಖಾಯಂ ಮಾಡುವ ಮತ್ತೊಂದು ಮಾರ್ಗ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಸಾಗುವಳಿ ಭೂಮಿ ಗುತ್ತಿಗೆ ನೀಡುವಾಗ ಒಬ್ಬರಿಗೆ ಎಷ್ಟು ಎಕರೆ ಭೂಮಿ ನೀಡಬೇಕು ಎಂಬ ಯಾವುದೇ ಮಾನದಂಡಗಳಿಲ್ಲ, ರಾಜ್ಯದಲ್ಲಿ ಸಲ್ಲಿಕೆಯಾಗಿರುವ ಪರಿಶಿಷ್ಟರ 50, 53 ಅರ್ಜಿಗಳು ಬಹುತೇಕ ವಜಾಗೊಂಡಿವೆ. ಅಲ್ಲದೇ ಅನೇಕ ಅರ್ಜಿ ಬಾಕಿ ಉಳಿದಿವೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಹುತೇಕರು ನಿವೇಶನ ರಹಿತರಿದ್ದು ನಿವೇಶನ ಕೊರತೆ ಎದುರಿಸುತ್ತಿದ್ದಾರೆ. ಗ್ರಾಮಗಳಲ್ಲಿ ಇಂದಿಗೂ ಸ್ಮಶಾನವಿಲ್ಲ, ಹಳ್ಳಿಗಳಲ್ಲಿರುವ ಸ್ಮಶಾನ ಹಾಗೂ ನಿವೇಶನ ಸಮಸ್ಯೆಗಳನ್ನು ಬಗೆಹರಿಸಿ ಬಳಿಕ ಗುತ್ತಿಗೆ ನೀಡುವ ಬಗ್ಗೆ ಆಲೋಚನೆ ಮಾಡುವಂತೆ ಮನವಿ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡಯ್ಯ, ಧರ್ಮೇಶ್, ಇಲಿಯಾಜ್ ಅಹ್ಮದ್, ಸಗುನಪ್ಪ, ಮಂಜುನಾಥ್, ಬಾಲರಾಜು, ಧರ್ಮ ಹಾಜರಿದ್ದರು.
Related