ಪಶುವೈದ್ಯಕೀಯ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಬಲಗೊಳಿಸಬೇಕಿದೆ

0
347

‘ವಿಶ್ವ ಪಶು ವೈದ್ಯಕೀಯ ದಿನ’ವನ್ನು ಏಪ್ರಿಲ್ 30 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ಬಾರಿಯ ‘ಪಶು ವೈದ್ಯಕೀಯ ದಿನ’ ದಂದು ಪ್ರಾಣಿಗಳ ಆರೋಗ್ಯ ರಕ್ಷಣೆ ಹಾಗೂ ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

ಈ ವರ್ಷದ ಪಶುವೈದ್ಯಕೀಯ ದಿನದ ಧ್ಯೇಯ ವಾಕ್ಯ ‘ಪಶುವೈದ್ಯಕೀಯ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಬಲಗೊಳಿಸುವುದು’ (Strenthening Veterinary Resilience) ಎಂಬುದಾಗಿದೆ. ಅಂದರೆ ಕಠಿಣ ಸವಾಲುಗಳು ಎದುರಾದರೂ ಧೃತಿಗೆಡದೆ ಸಮರ್ಥವಾಗಿ ಎದುರಿಸುವ ಶಕ್ತಿ ಪಶುವೈದರಲ್ಲಿ ಇದೆ. ಈ ಸಾಮರ್ಥ್ಯವನ್ನು ಬಲಪಡಿಸಲು ಅವಶ್ಯವಿರುವ ಸಹಾಯ ಹಾಗೂ ಸಂಪನ್ಮೂಲಗಳನ್ನು ನೀಡುವುದು ಈ ಕ್ಷಣದ ಆದ್ಯತೆ ಎಂಬುದೇ ಈ ಧ್ಯೇಯವಾಕ್ಯದ ಅರ್ಥ.

ಸಮಾಜದಲ್ಲಿ ಪಶುವೈದ್ಯರ ಪಾತ್ರ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಸಕಲ ಪ್ರಾಣಿ ಪಕ್ಷಿಗಳ ಯೋಗಕ್ಷೇಮ, ಸಾರ್ವಜನಿಕರ ಆರೋಗ್ಯ, ಪರಿಸರ, ವನ್ಯ ಜೀವಿಗಳ ರಕ್ಷಣೆ, ಸಂಶೋಧನೆ ಹೀಗೆ ಸಕಲ ಜೀವಿಗಳಿಗೆ ಲೇಸು ಬಯಸುವುದೇ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ(OIE)ಯ ಪ್ರಕಾರ ಪ್ರಸ್ತುತ ಜಗತ್ತಿನಾದ್ಯಂತ 411 ಮಿಲಿಯನ್ ಬಡಜನರು ಜಾನುವಾರು ಸಾಕಣೆಯಿಂದ ತಮ್ಮ ಬದುಕು ಕಂಡುಕೊಂಡಿದ್ದಾರೆ. ಈ ಸಮುದಾಯದ ಯೋಗಕ್ಷೇಮದಲ್ಲಿ ಪಶುವೈದ್ಯರ ಕೊಡುಗೆ ಅಪಾರ.

ಪಶುವ್ಶೆದ್ಯರ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಸದುದ್ದೇಶದಿಂದ ವಿಶ್ವ ಪಶುವೈದ್ಯಕೀಯ ಸಂಸ್ಥೆ (WVA) ಯು 2000ನೇ ವರ್ಷದಿಂದ ವಿಶ್ವ ಪಶುವೈದ್ಯಕೀಯ ದಿನದ ಆಚರಣೆಯನ್ನು ಆರಂಭಿಸಿತು. ಅದರಂತೆ ಪ್ರತಿ ವರ್ಷ ಎಪ್ರಿಲ್ ಕೊನೆಯ ಶನಿವಾರದಂದು ಜಗತ್ತಿನಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಅಂದು ದೇಶಾದ್ಯಂತ ವಿವಿಧ ವಿಚಾರ ಸಂಕಿರಣ, ಆರೋಗ್ಯ ಮತ್ತು ಲಸಿಕಾ ಶಿಬಿರ, ಹಿರಿಯರಿಗೆ, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.

ಪ್ರಪಂಚದ ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ದೇಶದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವುದು ವಿಷಾಧನೀಯ. ದೇಶದ ಜಾನುವಾರುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳಾದ ಕಾಲು ಬಾಯಿ ಜ್ವರ, ದೊಡ್ಡರೋಗ, ಟಿ.ಬಿ. ಬ್ರುಸಿಲ್ಲೂ ಇತ್ಯಾದಿ ಇರುವುದೇ ಮುಖ್ಯ ಕಾರಣ. ಇದರಿಂದ ದೇಶದ ಆರ್ಥಿಕತೆಗೆ ಪ್ರತಿ ವರ್ಷ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಈ ರೋಗಗಳಿಂದ ದೇಶ ಮುಕ್ತವಾಗಲು ಪರಿಣಾಮಕಾರಿ ಹಾಗೂ ಶಿಸ್ತುಬದ್ಧ ಲಸಿಕಾ ಕಾರ್ಯಕ್ರಮ ದೇಶಾದ್ಯಂತ ಜಾರಿಯಲ್ಲಿದೆ.

ಜಾನುವಾರುಗಳಲ್ಲಿ ರೋಗಗಳು ನಿರ್ಮೂಲನೆಯಾಗದೇ ಮಾನವ ಆರೋಗ್ಯ ಸಾಧ್ಯವಿಲ್ಲ. ಈ ಬಗ್ಗೆ ಪಶುವೈದ್ಯರು, ಮಾನವವೈದ್ಯರು, ವಿಜ್ಞಾನಿಗಳು, ಸಾರ್ವಜನಿಕರು ಒಂದಾಗಿ ಶ್ರಮಿಸಿದರೆ ಮಾತ್ರ ರೋಗಮುಕ್ತ ದೇಶ ನಿರ್ಮಾಣ ಸಾಧ್ಯ. ಇದರಿಂದ ಜಾಗತಿಕ ಮಟ್ಟದಲ್ಲಿ ದೇಶದ ಜಾನುವಾರು ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಹಾಗೂ ಆದಾಯವನ್ನು ನಿರೀಕ್ಷಿಸಬಹುದು.

ಬರಹ : ಡಾ.ನಾಗರಾಜ್ ಕೆ.ಎಂ ಸಹಾಯಕ ಪ್ರಾಧ್ಯಾಪಕರು, ಪಶುಪಾಲನಾ ಇಲಾಖೆ, ಹೊಸನಗರ
ಜಾಹಿರಾತು

LEAVE A REPLY

Please enter your comment!
Please enter your name here