ಪಾಫ್ಯುಲರ್ ಸೈಕಲ್ ಮಾರ್ಟ್ ಸ್ಥಾಪಕ ಎಂ. ಭಾರಧ್ವಾಜ್ ಇನ್ನಿಲ್ಲ !

0
277

ಶಿವಮೊಗ್ಗ: ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ ಎಂ. ಭಾರಧ್ವಾಜ್(89) ಅವರು ಇಂದು ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಶಿವಮೊಗ್ಗದಲ್ಲಿ ಪಾಫ್ಯುಲರ್ ಸೈಕಲ್ ಮಾರ್ಟ್ ಸ್ಥಾಪಿಸಿ ಹೀರೋ ಸೈಕಲ್ ಮತ್ತು ಹೀರೋಹೋಂಡಾ ಮೋಟಾರ್ ಬೈಕ್ ಗಳ ಮಾರಾಟಗಾರರಾಗಿ, ಹೆಸರಾಂತ ಉದ್ಯಮಿಯಾಗಿ ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ 1988 ರಿಂದ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಜಿಲ್ಲೆಯ ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸ್ಥಾಪನೆ ಹಾಗೂ ರೈಲ್ವೇ ಅಭಿವೃದ್ಧಿಗೆ ದುಡಿದಿದ್ದರು. ರೋಟರಿ ಶಿವಮೊಗ್ಗ, ವಿದ್ಯಾಭಾರತಿ ಟ್ರಸ್ಟ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು, ಎಜುಕೇರ್ ಸಂಸ್ಥಾಪಕ ಅಧ್ಯಕ್ಷರು, ಆಟೋಮೊಬೈಲ್ ಡೀಲರ್ಸ್ ಅಸೋಸೊಯೇಷನ್ ಗೌರವಾಧ್ಯಕ್ಷರಾಗಿ, ರೈಲ್ವೇ ಸಲಹಾ ಸಮಿತಿ ಸದಸ್ಯರಾಗಿ, ಭಾರತೀಯ ವಿದ್ಯಾಭವನದ ಶಿವಮೊಗ್ಗ ಶಾಖೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ತಂದೆ ದೊರೆಸ್ವಾಮಿ ಅಯ್ಯಂಗಾರ್ ಸ್ಮರಣಾರ್ಥ ದೊರೆಸ್ವಾಮಿ ಅಯ್ಯಂಗಾರ್ ಟ್ರಸ್ಟ್ ಸ್ಥಾಪಿಸಿ ಭಾರತದ ಸಂಗೀತ ದಿಗ್ಗಜರನ್ನು ಶಿವಮೊಗ್ಗಕ್ಕೆ ಕರೆತಂದು ಸಂಗೀತದ ರಸದೌತಣ ಉಣಬಡಿಸಿದ ಕೀರ್ತಿ ಭಾರಧ್ವಾಜ್ ಅವರಿಗೆ ಸಲ್ಲುತ್ತದೆ. ಶಿವಮೊಗ್ಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿದ್ದ ಪಾಪ್ಯುಲರ್ ಸೈಕಲ್ ಶಾಪ್ ಭಾರಧ್ವಾಜ್ ಎಂದೇ ಪ್ರಸಿದ್ಧರಾದ ಇವರು ಅನೇಕ ಸಂಘ ಸಂಸ್ಥೆಗಳ ಪೋಷಕರಾಗಿ, ದಾನಿಯಾಗಿ ಚಿರಪರಿಚಿತರಾಗಿದ್ದರು. ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಯಾಗಿ ತಮ್ಮ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಸಂಘ, ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದ್ದರು.

ಶ್ರೀರಾಮ ಸೇವಾ ಮಂಡಳಿ, ಶ್ರೀ ವಿದ್ಯಾ ಗಣಪತಿ ಸೇವಾ ಸಂಸ್ಥೆ, ಕರ್ನಾಟಕ ಸಂಘ ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಶಿವಮೊಗ್ಗೆಯ ಸಾಂಸ್ಕೃತಿಕ ರಾಯಭಾರಿಯಾಗಿ ಅನೇಕ ಕೊಡುಗೆ ನೀಡಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಸರ್ಕಾರ ಮತ್ತು ಅಭಿವೃದ್ಧಿ ಯೋಜನೆಗಳ ಜಾರಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಇಂದು ಬೆಳಗ್ಗೆ ಕೂಡ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸರಳ ಸಜ್ಜನರು ಹಾಗೂ ಸದಾ ಚಟುವಟಿಕೆಯ ವ್ಯಕ್ತಿತ್ವ ಹೊಂದಿದ್ದವರಾಗಿದ್ದರು. ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಜಿಲ್ಲೆಯ ಪ್ರಮುಖ ರಾಜಕಾರಣಿಗಳೊಂದಿಗೆ ಅವರು ಒಡನಾಟ ಹೊಂದಿದ್ದರು.

ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದು, ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಅನೇಕ ಸಂಘ, ಸಂಸ್ಥೆಗಳು, ಜಿಲ್ಲಾ ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿವೆ.

ಜೂ. 22 ಬುಧವಾರ ಬೆಳಗ್ಗೆ 10 ಗಂಟೆಗೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಾಹಿರಾತು

LEAVE A REPLY

Please enter your comment!
Please enter your name here