ಪಿಎಂ ಕೇರ್ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳ ಹಸ್ತಾಂತರ

0
193

ಚಿಕ್ಕಮಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರನ್ನು ಕಳೆದುಕೊಂಡಂತಹ ಜಿಲ್ಲೆಯ 6 ಮಕ್ಕಳಿಗೆ ’ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಸೋಮವಾರ ಜಿಲ್ಲಾ ಪಂಚಾಯತ್‌ನಲ್ಲಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೌಲಭ್ಯಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿರವರು ದೇಶದಾದ್ಯಂತ ವರ್ಚುವಲ್ ಮೋಡ್ ಮೂಲಕ 4,345 ಮಕ್ಕಳಿಗೆ ಪಿಎಂ ಕೇರ್ ಬ್ಯಾಂಕ್ ಪಾಸ್‌ಬುಕ್ ಮತ್ತು ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆರೋಗ್ಯ ಕಾರ್ಡ್ ಅನ್ನು ಹಸ್ತಾಂತರಿಸಿದರು.

ವಿಡಿಯೋ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ -19 ಸಮಯದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಜನರ ಕಷ್ಟಕರವಾದ ಪರಿಸ್ಥಿತಿ ಬಗ್ಗೆ ತಿಳಿದಿದ್ದು, ಈ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯು ಒಂದು ಪ್ರಯತ್ನವಾಗಿದೆ ಎಂದರು.

ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದಲ್ಲಿ ಫಲಾನುಭವಿಗಳಿಗೆ ಪಿಎಂ-ಕೇರ್ಸ್ ಸಹಾಯ ಮಾಡಲಿದ್ದು, ಇತರೆ ದೈನಂದಿನ ಅಗತ್ಯಗಳಿಗಾಗಿ ವಾತ್ಸಲ್ಯ ಯೋಜನೆ ಮೂಲಕ ಪ್ರತಿ ತಿಂಗಳು ರೂ.4,000 ಸಹಾಯಧನ ನೀಡಲಾಗುತ್ತದೆ ಎಂದರು.

ಮಾರ್ಚ್ 11, 2020 ರಿಂದ ಫೆಬ್ರವರಿ 28 2022ರ ಅವಧಿಯಲ್ಲಿ, ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರನ್ನು ಅಥವಾ ಪಾಲಕರನ್ನು ಅಥವಾ ಕಾನೂನುಬದ್ಧವಾಗಿ ದತ್ತು ಪಡೆದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ನೆರವಿಗಾಗಿ ಪ್ರಧಾನ ಮಂತ್ರಿಯವರು ಮೇ 29 2021 ರಂದು ಪಿಎಂ ಕೇರ್ಸ್ ಯೋಜನೆಯನ್ನು ಪ್ರಾರಂಭಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ಕಳೆದ 2 ವರ್ಷಗಳಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗುವ ದೃಷ್ಟಿಯಿಂದ ಅವರಿಗೆ ಆರ್.ಟಿ.ಇ ಮೂಲಕ ಶಿಕ್ಷಣವನ್ನು, ಶೈಕ್ಷಣಿಕ ಸೌಲಭ್ಯಕ್ಕಾಗಿ ವಿದ್ಯಾರ್ಥಿ ವೇತನವನ್ನು ಹಾಗೂ ರೂ.5 ಲಕ್ಷ ಆರೋಗ್ಯ ವಿಮೆಯನ್ನು ನೀಡಲಾಗುತ್ತಿದೆ. ಮಕ್ಕಳಿಗೆ 23 ವರ್ಷ ತುಂಬಿದ ನಂತರ ಜಿಲ್ಲಾಧಿಕಾರಿ ಹಾಗೂ ಮಗುವಿನ ಜಂಟಿ ಖಾತೆಯಲ್ಲಿ ಜಮಾ ಮಾಡಿರುವ ರೂ.10 ಲಕ್ಷವನ್ನು ಫಲಾನುಭವಿಗೆ ನೀಡಲಾಗುತ್ತದೆ ಎಂದರು.

ಜಿಲ್ಲೆಯ 6 ಮಕ್ಕಳಲ್ಲಿ ಒಬ್ಬ ವಿದ್ಯಾರ್ಥಿನಿಗೆ 18 ವರ್ಷ ತುಂಬಿದ್ದು, ಎಲ್ಲ ವಿದ್ಯಾರ್ಥಿಗಳು ವಿವಿಧ ಸ್ಥಳಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ ಹಾಗೂ ಪ್ರತಿಯೊಬ್ಬರಿಗೂ ಹಣ ಸಹಾಯವನ್ನು ನೀಡುವ ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರವು ಸಹ ಫಲಾನುಭವಿಗಳ ಖಾತೆಗೆ ರೂ. ಒಂದು ಲಕ್ಷ ಜಮಾ ಮಾಡಿದ್ದು, ಕರ್ನಾಟಕದಲ್ಲಿ 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಮದುವೆಗೆ ಅಥವಾ ಉನ್ನತ ಶಿಕ್ಷಣಕ್ಕಾಗಿ ರೂ.ಒಂದು ಲಕ್ಷ ಸಹಾಯಧನವನ್ನು ನೀಡುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಶೃಂಗೇರಿ ಶಾಸಕ ಟಿ.ರಾಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here