ಪಿಡಿಒ ಅಮಾನತು ಹಿನ್ನೆಲೆ ; ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

0
368

ಮೂಡಿಗೆರೆ: ಗೋಣಿಬೀಡು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಅಮಾನತ್ತುಗೊಳಿರುವುದು ಖಂಡನೀಯ ಎಂದು ಗೋಣಿಬೀಡು ಗ್ರಾ. ಪಂ. ಸದಸ್ಯರು ಹಾಗೂ ಸಾರ್ವಜನಿಕರು ಗುರುವಾರ ಗೋಣಿಬೀಡು ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಾಜಿ ಜಿ. ಪಂ. ಸದಸ್ಯ ವಿ. ಕೆ. ಶಿವೇಗೌಡ ಮಾತನಾಡಿ, ದಾರಿ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಜಗಳ ನಡೆಯುತ್ತಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ, ಗ್ರಾಮಸಭೆ ಹಾಗೂ ಗ್ರಾ. ಪಂ. ರೆಜುಲೇಷನ್, ತಾ. ಪಂ. ಇಒ ಅವರ ಆದೇಶದ ಮೇಲೆ ಗೋಣಿಬೀಡು ಗ್ರಾ. ಪಂ. ಪಿಡಿಒ ಅವರು ಸ್ಥಳಕ್ಕೆ ಭೇಟಿ ನೀಡಿ ದಾರಿಗೆ ಅಡ್ಡವಾಗಿದ್ದ ಗೇಟು ಮತ್ತು ಶೆಡ್‍ನ್ನು ಕಾನೂನು ಪ್ರಕಾರವಾಗಿ ತೆರವುಗೊಳಿಸಿದ್ದಾರೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ಪಿಡಿಒ ಅವರನ್ನೇ ಏಕಾಏಕಿ ಅಮಾನತ್ತುಗೊಳಿಸಿ ಅಮಾಯಕ ಅಧಿಕಾರಿಗೆ ತೊಂದರೆ ನೀಡಿದಂತಾಗಿದೆ. ಅಮಾಯಕ ಪಿಡಿಓ ಅವರ ಅಮಾನತ್ತನ್ನು ವಜಾಗೊಳಿಸಿ ಕೂಡಲೇ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

ಗ್ರಾ.ಪಂ. ಅಧ್ಯಕ್ಷೆ ರಾಧಾ ಮಿತ್ರೇಶ್ ಮಾತನಾಡಿ, ದಾರಿ ವಿಚಾರವಾಗಿ ಅಣ್ಣತಮ್ಮಂದಿರ ಜಗಳದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಗ್ರಾಮಸಭೆ ಹಾಗೂ ಗ್ರಾ. ಪಂ. ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ರೆಜುಲೇಷನ್ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಅದರಂತೆ ಕಾನೂನು ಅನುಸಾರವಾಗಿ ಕ್ರಮ ವಹಿಸಲು ಸೂಚಿಸಿದ್ದರಿಂದ ಪಿಡಿಒ ಮತ್ತು ಗೋಣಿಬೀಡು ಪಿಎಸ್‍ಐ ಅವರು ಸ್ಥಳಕ್ಕೆ ಭೇಟಿ ನೀಡಿ ಗೇಟು ಮತ್ತು ಸೆಡ್‍ನ್ನು ತೆರವುಗೊಳಿಸಲಾಗಿದೆ. ಇದನ್ನೇ ತಪ್ಪು ಎನ್ನುವ ರೀತಿಯಲ್ಲಿ ಗ್ರಾ. ಪಂ. ಪಿಡಿಒ ಅವರನ್ನು ಅಮಾನತ್ತುಗೊಳಿಸಲಾಗಿದೆ.

ಈ ರೀತಿಯಾದರೆ ಗ್ರಾ.ಪಂ. ನಲ್ಲಿ ಯಾರೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್ಲಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಗ್ರಾ. ಪಂ. ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಕೆ. ಆರ್. ಮಹೇಶ್, ವಿಜೇಂದ್ರ, ಪ್ರಹ್ಲಾಧ್, ಶರತ್, ಸುಪ್ರಿತ್, ರೇಣುಕಾ, ಭಾರತೀ ಪ್ರಕಾಶ್, ಆನಂದ್, ಸೌಭಾಗ್ಯ, ಮಹೇಶ್, ಮುಖಂಡರಾದ ವರದೇಗೌಡ, ಮೋಹನ್, ಲಕ್ಷ್ಮಣ್ ವಾಲಕರೆಟಿ, ಅಫ್ರೋಜ್, ಮೊಹಮ್ಮದ್ ಜಕಾವುಲ್ಲಾ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here