ಪಿಸಿವಿ ಲಸಿಕೆ ಹಾಕಿಸಿ ಮಕ್ಕಳನ್ನು ನ್ಯೂಮೋನಿಯಾದಿಂದ ರಕ್ಷಿಸಿ | ಮಕ್ಕಳಿಗೆ ಪಿಸಿವಿ ಹಾಕಿಸುವ ಮೂಲಕ ಲಸಿಕಾಕರಣ ಯಶಸ್ವಿಗೊಳಿಸಿ: ಡಿಸಿ

0
135

ಶಿವಮೊಗ್ಗ: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾರ್ವತ್ರಿಕ ಲಸಿಕಾಕರಣಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ‘ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆ’(ಪಿಸಿವಿ) ಯನ್ನು ಎಲ್ಲ ಅರ್ಹ ಮಕ್ಕಳಿಗೆ ನೀಡುವ ಮೂಲಕ ಈ ಲಸಿಕಾಕರಣವನ್ನು ಯಶಸ್ವಿಗೊಳಸಿಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನುಡಿದರು.

ಇಂದು ತುಂಗಾನಗರ ನಗರ ಪ್ರಸೂತಿ ಆರೋಗ್ಯ ಕೇಂದ್ರದಲ್ಲಿ ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ನೀಡಿಕೆ ಕುರಿತು ಏರ್ಪಡಿಸಲಾಗಿದ್ದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನ್ಯೂಮೋನಿಯಾದಂತಹ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಪಿಸಿವಿ ಲಸಿಕೆಯನ್ನು ಎಲ್ಲ ಮಕ್ಕಳಿಗೆ ನೀಡುವ ಮೂಲಕ ಆರೋಗ್ಯವಂತ ದೇಶ ಮಾಡುವಲ್ಲಿ ಎಲ್ಲರೂ ಸಹಕರಿಸಬೇಕೆಂದರು.

ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪಿಸಿವಿ ಒಂದು ವರದಾನವಾಗಿ ಬಂದಿದೆ. ಮಕ್ಕಳನ್ನು ಉಸಿರಾಟ ಸಂಬಂಧಿ ಕಾಯಿಲೆಯಿಂದ ರಕ್ಷಿಸುವ ಈ ಲಸಿಕೆ ದರ ಖಾಸಗಿಯಾಗಿ ದುಬಾರಿಯಾಗಿದ್ದು ಭಾರತ ಸರ್ಕಾರ ಇದೀಗ ಉಚಿತವಾಗಿ ಮೂರು ಡೋಸ್‍ಗಳಲ್ಲಿ ನೀಡುತ್ತಿದೆ. ಮೂರೂ ಡೋಸ್‍ಗಳನ್ನು ಪೋಷಕರು ಸಕಾಲದಲ್ಲಿ ಮಕ್ಕಳಿಗೆ ಹಾಕಿಸುವ ಮೂಲಕ ಈ ಲಸಿಕಾಕರಣದ ಸದುಪಯೋಗ ಪಡೆಯಬೇಕೆಂದು ಹೇಳಿದರು.

ಡಬ್ಲ್ಯುಹೆಚ್‍ಓ ಸಲಹೆಗಾರ ಡಾ.ಸತೀಶ್‍ಚಂದ್ರ ಮಾತನಾಡಿ, ಭಾರತ ಸರ್ಕಾರದ ಸಾರ್ವತ್ರಿಕ ಲಸಿಕೆಯಲ್ಲಿ ಇದು 12 ನೇ ಲಸಿಕೆಯಾಗಿ ಸೇರ್ಪಡೆಗೊಂಡಿದೆ. ಇದು ಸ್ಟ್ರೆಪ್ಟೋಕೋಕಸ್ ನ್ಯುಮೋನಿಯಾ(ನ್ಯುಮೊಕಾಕಲ್) ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳ ಒಂದು ಗುಂಪು. ನ್ಯುಮೋಕಾಕಲ್ ರೋಗಾಣು ಶರೀರದ ಬೇರೆ ಬೇರೆ ರೀತಿಯ ರೋಗಗಳಿಗೆ ಕಾರಣವಾಗಬಹುದಾಗಿದ್ದು ಐದು ವರ್ಷದ ಒಳಗಿನ ಮಕ್ಕಳಲ್ಲಿ ಈ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ನ್ಯೂಮೋನಿಯಾಗೆ ಸ್ಪ್ರೆಪ್ಟೋಕೋಕಸ್ ನ್ಯೂನಿಯಾ ಪ್ರಮುಖ ಕಾರಣವಾಗಿದೆ.

ನ್ಯುಮೊಕಾಕಲ್ ನ್ಯುಮೋನಿಯಾ ಕಡಿಮೆ ಅವಧಿಯ ಉಸಿರಾಟ ಸಂಬಂಧಿಯ ತೀವ್ರ ಪ್ರಮಾಣದ ಸೋಂಕಾಗಿದ್ದು ಈ ಸೋಂಕಿನಿಂದ ಶ್ವಾಸಕೋಶಗಳಲ್ಲಿ ಉರಿಯೂತ ಹಾಗೂ ದ್ರವಗಳ ಶೇಖರಣೆ ಉಂಟಾಗುತ್ತದೆ. ಇದರಿಂದಾಗಿ ಸರಾಗವಾಗಿ ಉಸಿರಾಡಲು ಆಗದೆ ಒಳ ಹೋಗುವ ಆಮ್ಲಜನಕ ಪ್ರಮಾಣ ಕಡಿಮೆ ಆಗುತ್ತದೆ. ಮಕ್ಕಳಿಗೆ ಪಿಸಿವಿ ಲಸಿಕೆ ನೀಡಿದರೆ ಈ ಕಾಯಿಲೆಯಿಂದ ಉಂಟಾಗುವ ತೊಂದರೆ ಮತ್ತು ಸಾವನ್ನು ತಡೆಗಟ್ಟಬಹುದು.

ಮಗು ಹುಟ್ಟಿದ ಮೊದಲ ವರ್ಷದಲ್ಲಿ ಗಂಭೀರ ನ್ಯುಮೊಕಾಕಲ್ ಕಾಯಿಲೆ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆಯಾದರೂ ಎರಡು ವರ್ಷಗಳವರೆಗೂ ಇದರ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ತುಂತುರುಗಳಿಂದ ಈ ರೋಗ ಹರಡುತ್ತದೆ.

ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳು ತಮ್ಮ ರೋಗನಿರೋಧಕ ಶಕ್ತಿಯಿಂದ ಈ ಸೋಂಕಿನ ವಿರುದ್ದ ಹೋರಾಡಬಹುದು. ಐದು ವರ್ಷದ ಒಳಗಿನ ವಿಶೇಷವಾಗಿ ಎರಡು ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ಸಿಲುಕಿ ಬಲಿಯಾಗುವ ಸಾಧ್ಯತೆ ಹೆಚ್ಚಿದ್ದು ಶೇ.15 ರಿಂದ 17 ರಷ್ಟು 02 ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಪಿಸಿವಿ ಲಸಿಕೆಯು ಚಿಕ್ಕ ಮಕ್ಕಳನ್ನು ನ್ಯುಮೋನಿಯಾ ಕಾಯಿಲೆಯಿಂದ ರಕ್ಷಿಸುತ್ತದೆ. ಈ ಲಸಿಕೆ ಸುರಕ್ಷಿತವಾಗಿದ್ದು ಈಗಾಗಲೇ ಜಗತ್ತಿನ 146 ದೇಶಗಳಲ್ಲಿ ನೀಡಲಾಗುತ್ತಿದೆ. 2017 ರಿಂದ ನಮ್ಮ ದೇಶದ 5 ರಾಜ್ಯಗಳಲ್ಲಿ ಈ ಲಸಿಕೆ ನೀಡಲಾಗುತ್ತಿದ್ದು ಈ ರಾಜ್ಯಗಳಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳು ಅತ್ಯಂತ ಕಡಿಮೆ ಇದೆ.

ಸುಮಾರು 20 ವರ್ಷಗಳಿಂದ ಖಾಸಗಿಯಾಗಿ ಈ ಲಸಿಕೆ ಲಭ್ಯವಿದ್ದು ಇದರ ವೆಚ್ಚ ಸುಮಾರು 4 ರಿಂದ 6 ಸಾವಿರ ಆಗಲಿದೆ. ಆದರೆ ಭಾರತ ಸರ್ಕಾರ ಇದೀಗ ಸಾರ್ವತ್ರಿಕ ಲಸಿಕಾಕರಣದಲ್ಲಿ ಈ ಲಸಿಕೆಯನ್ನು ಸೇರ್ಪಡೆಗೊಳಿಸಿದ್ದು ಸಂಪೂರ್ಣ ಉಚಿತವಾಗಿ ಮಗುವಿಗೆ ಒಂದೂವರೆ ತಿಂಗಳಿಗೆ, ಮೂರೂವರೆ ತಿಂಗಳಿಗೆ ಮತ್ತು ಒಂಭತ್ತು ತಿಂಗಳಿಗೆ (ಬೂಸ್ಟರ್ ಡೋಸ್) ಹೀಗೆ ಮೂರು ಡೋಸ್‍ಗಳಲ್ಲಿ ನೀಡುತ್ತಿದೆ.

ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2021-22 ನೇ ಸಾಲಿಗೆ ಒಟ್ಟು 24,284 ಮಕ್ಕಳಿಗೆ ಸಾರ್ವತ್ರಿಕ ಲಸಿಕಾಕರಣದಲ್ಲಿ ಈ ಲಸಿಕೆ ನೀಡಲಾಗುವುದು. ಕೋವಿಡ್ 19 ಲಸಿಕೆ ಅಭಿಯಾನ ಮುಂದುವರೆಯುವುದರ ಜೊತೆಗೆ ಆರೋಗ್ಯ ಇಲಾಖೆ ಪಿಸಿವಿ ಅಭಿಯಾನಕ್ಕೆ ಸಿದ್ದತೆ ನಡೆಸಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಮಕ್ಕಳಿಗೆ(ಐದು ವರ್ಷದೊಳಗಿನ) ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.

ತುಂಗಾನಗರ ನಗರ ಆರೋಗ್ಯ ಕೇಂದ್ರದಲ್ಲಿ ಇಂದು ಮೊದಲನೇ ಡೋಸ್ ಪಿಸಿವಿ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ಭೀಮಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎ. ಅಕ್ತಾರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here