ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರ | ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ತಡೆಗೆ ಎಲ್ಲರೂ ಕೈಜೋಡಿಸಬೇಕು: ಡಿಸಿ

0
149

ಶಿವಮೊಗ್ಗ : ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡದಂತೆ ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994 ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ವಿಭಾಗ ಇವರ ವತಿಯಿಂದ ಇಂದು ನಗರದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಸೆಂಟ್ರಲ್ ಇಲ್ಲಿ ಏರ್ಪಡಿಸಲಾಗಿದ್ದ ವಿಭಾಗೀಯ ಮಟ್ಟದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಗ ಪತ್ತೆಯಂತಹ ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗಬೇಕಾದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಹೆಣ್ಣು ಭ್ರೂಣ ಪತ್ತೆಗಾಗಿ ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ. ಈ ದುರುಪಯೋಗವನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಲಹಾ ಮಂಡಳಿ ಹಾಗೂ ತಪಾಸಣಾ ಸಮಿತಿಗಳಿದ್ದು, ಬಹಳಷ್ಟು ಸ್ಟಿಂಗ್ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಈ ಜಿಲ್ಲೆಯಿಂದ ಬೇರೆ ಜಿಲ್ಲೆ, ಬೇರೆ ಪ್ರದೇಶಗಳಿಗೆ ಹೋಗಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಹಾಗೂ ಅನಧಿಕೃತವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್‍ಗಳನ್ನು ಇರಿಸಿಕೊಂಡು ವ್ಯವಹರಿಸಲಾಗುತ್ತಿದೆ. ಸಮಿತಿಗಳಿದ್ದರೂ ಸಹ ಸಂಪೂರ್ಣವಾಗಿ ಇದನ್ನು ತಡೆಗಟ್ಟಲು ಆಗಿಲ್ಲ. ಇದನ್ನು ತಡೆಗಟ್ಟಲು ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಭಾಗಗಳು, ಐಎಂಎ, ಎನ್‍ಜಿಓ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಮುಖ್ಯವಾಗಿ ಸಮಾಜ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮುದಾಯದಲ್ಲಿನ ಮೂಢನಂಬಿಕೆ ಹೋಗಲಾಡಿಸಲು ಹೆಚ್ಚಿನ ಪ್ರಯತ್ನಗಳು ಆಗಬೇಕು. ಹಾಗೂ ಇದಕ್ಕೆ ಎಲ್ಲರೂ ಸಹಕರಿಸಬೇಕೆಂದರು.

ಇಂದಿನ ಕಾರ್ಯಾಗಾರದಲ್ಲಿ ಬೆಂಗಳೂರು ವಿಭಾಗ ವ್ಯಾಪ್ತಿಯ 09 ಜಿಲ್ಲೆಗಳ ಡಿಹೆಚ್‍ಓ ಸೇರಿದಂತೆ ಪಿಸಿ & ಪಿಎನ್‍ಡಿಸಿಟಿ ಸದಸ್ಯರು, ವೈದ್ಯರು ಬಂದಿದ್ದು ಎಲ್ಲ ಸೇರಿ ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸಲು ಒಂದು ಮೂಲ ನಕ್ಷೆ ತಯಾರಿಸಬೇಕು. ಕಾರ್ಯಕ್ರವನ್ನು ಅರ್ಥಪೂರ್ಣಗೊಳಿಸಿ ಫಲಪ್ರದವಾಗುವಂತೆ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್ ಮಾತನಾಡಿ, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ತಡೆಯುವ ನಿಟ್ಟಿನಲ್ಲಿ ಡಿಹೆಚ್‍ಓ ನೇತೃತ್ವದ ತಂಡ ಜಿಲ್ಲೆಯಲ್ಲಿ ಅನೇಕ ಬಾರಿ ದಿಢೀರ್ ದಾಳಿ ನಡೆಸುತ್ತ ಬಂದಿದೆ. ಈ ತಂಡ ಇನ್ನೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ನಿಯಮಿತವಾಗಿ ಜಿಲ್ಲೆಯಲ್ಲಿ ಒಟ್ಟು ಗರ್ಭಧಾರಣೆ, ಪ್ರಸವ ಮತ್ತು ಇವರೆಡರ ನಡುವಿನ ವ್ಯತ್ಯಾಸ ಮತ್ತು ಅದಕ್ಕೆ ಕಾರಣಗಳನ್ನು ಪರಿಶೀಲಿಸುತ್ತಾ ಇರಬೇಕು. ಯಾರಾದರೂ ಕಾನೂನುಬಾಹಿರವಾಗಿ ಭ್ರೂಣ ಪತ್ತೆ ಅಥವಾ ಹತ್ಯೆಗೆ ಕೇಳಿಕೊಂಡರೆ ಅಂತಹವರಿಗೆ ಮನವರಿಕೆ ಮಾಡಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪಿ.ಸಿ.ಎನ್.ಡಿ.ಟಿ ಉಪ ನಿರ್ದೇಶಕ ಡಾ.ವಿವೇಕ್ ದೊರೈ ಪಿಪಿಟಿ ಪ್ರದರ್ಶನ ಮೂಲಕ ಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994(ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ) ಹಾಗೂ ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆ ತಡೆ ಜೊತೆಗೆ ಹೆಣ್ಣು ಲಿಂಗಾನುಪಾತ ಹೆಚ್ಚಿಸುವ ಕುರಿತಾದ ಅಂಶಗಳ ಬಗ್ಗೆ ಮಾತನಾಡಿದರು.

ಬೆಂಗಳೂರು ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪನಿರ್ದೇಶಕಿ ಡಾ.ಮಮತ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾಯ್ದೆ ಕುರಿತು ಮಾತನಾಡಿದರು.

ಡಿಹೆಚ್ ಓ ಡಾ.ರಾಜೇಶ್ ಸುರಗಿಹಳ್ಳಿ ಸ್ವಾಗತಿಸಿದರು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗಲೀಕರ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here