ಪೆಂಡಾಲ್ ಹಾಕ್ಸಿ 150 ಜನ್ರಿಗೆ ಬಿರ್ಯಾನಿ ಊಟ : ಟೈಸನ್’ನ ಮೊದಲ ವರ್ಷದ ಹುಟ್ಟುಹಬ್ಬ ಅದ್ಧೂರಿ ಆಚರಣೆ ! ದುಬಾರಿ ಗಿಫ್ಟ್ !!

0
522

ಶಿವಮೊಗ್ಗ: ಶ್ವಾನ ಪ್ರಿಯರೊಬ್ಬರು ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.

ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿಸಿ, ಸ್ನೇಹಿತರಿಗೆಲ್ಲ ಬಿರಿಯಾನಿ ಊಟ ಹಾಕಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಅಷ್ಟೆ ಅಲ್ಲದೇ, ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ಅತ್ಯಂತ ದುಬಾರಿ ಗಿಫ್ಟ್ ಸಹ ನೀಡಿದ್ದಾರೆ. ರಾಗಿಗುಡ್ಡದ ಮೊಹಮ್ಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ಟೈಸನ್ ಎಂದು ಹೆಸರಿಟ್ಟಿದ್ದಾರೆ. ಜನವರಿ 13ರಂದು ಟೈಸನ್’ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಪೆಂಡಾಲ್, ಕೇಕ್, ಚಿಕನ್ ಬಿರಿಯಾನಿ !

ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮೊಹಮ್ಮದ್ ಅಯಾಜ್ ಅವರು ರಾಗಿಗುಡ್ಡದ ತಮ್ಮ ಮನೆ ಬಳಿ ಪೆಂಡಾಲ್ ಹಾಕಿಸಿದ್ದಾರೆ. ಜನವರಿ 13ರ ಸಂಜೆ ಕೇಕ್ ಕಟ್ ಮಾಡಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರಿಗೆಲ್ಲ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. ಸುಮಾರು 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.

ದುಬಾರಿ ಗಿಫ್ಟ್…!

ಇದಿಷ್ಟೆ ಅಲ್ಲ, ಮೊಹಮದ್ ಅಯಾಜ್ ಅವರು ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ದುಬಾರಿ ಗಿಫ್ಟ್ ನೀಡಿದ್ದಾರೆ. ಅತ್ಯಂತ ಮೆತ್ತನೆಯ ಹಾಸಿಗೆಯೊಂದನ್ನು ತರಿಸಿಕೊಂಡಿದ್ದಾರೆ. ಅದರ ಬೆಲೆ ಸುಮಾರು 13 ಸಾವಿರ ರೂ. ಅಂತೆ. ‘ಟೈಸನ್ ಆರಾಮಾಗಿ ಕೂರಬೇಕು. ಹಾಗಾಗಿ ತುಂಬಾ ಮೆತ್ತನೆಯ ಹಾಸಿಗೆ ತರಿಸಿ, ಗಿಫ್ಟ್ ಮಾಡಿದ್ದೇನೆ’ ಎಂದು ಮೊಹಮ್ಮದ್ ಅಯಾಜ್ ಹೇಳಿದ್ದಾರೆ.

ಶ್ವಾನಕ್ಕಾಗಿ ಪ್ರತ್ಯೇಕ ಮನೆಯಲ್ಲಿ ವಾಸ

ಟೈಸನ್’ಗಾಗಿ ಮೊಹಮದ್ ಅಯಾಜ್ ಅವರು ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿಯಲ್ಲಿ ಮೊಹಮದ್ ಅಯಾಜ್ ಅವರ ಕುಟುಂಬದವರು ವಾಸವಾಗಿದ್ದಾರೆ. ಅಪ್ಪ, ಅಮ್ಮ, ಅಣ್ಣ, ಅಕ್ಕಂದಿರಿದ್ದಾರೆ. ನಮ್ಮ ಮನೆಯಲ್ಲಿ ನಾಯಿ ಸಾಕಲು ವಿರೋಧವಿದೆ. ಹಾಗಾಗಿ ರಾಗಿಗುಡ್ಡದಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಟೈಸನ್ ಜೊತೆಗೆ ಇರುತ್ತೇನೆ. ನಿತ್ಯ ಮನೆಗೆ ಹೋಗಿ ಎಲ್ಲರನ್ನ ಮಾತನಾಡಿಸಿಕೊಂಡು ಬರುತ್ತೇನೆ. ಅದರೆ ಇಲ್ಲಿ ಬಂದು ಉಳಿದುಕೊಳ್ಳುತ್ತೇನೆ’ ಎಂದು ಹೇಳುತ್ತಾರೆ ಮೊಹಮದ್ ಅಯಾಜ್.

ನಾಯಿ ಪ್ರೀತಿ ಬೆಳೆದಿದ್ದು ಹೇಗೆ ?

ಮೊಹಮದ್ ಅಯಾಜ್ ಅವರು ಚನ್ನಗಿರಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆಂದು ಬಂದ ನಾಯಿಯೊಂದಕ್ಕೆ ಹೋಟೆಲ್ ಬಳಿ ಆಶ್ರಯ ನೀಡಿದ್ದರಂತೆ. ‘ನನಗೆ ಪ್ರತಿದಿನ 25 ರೂ. ಕೂಲಿ ಕೊಡುತ್ತಿದ್ದರು. ಆ ಹಣವೆಲ್ಲ ನಾಯಿಯ ಹಾಲು, ತಿಂಡಿಗೆ ಖರ್ಚಾಗುತ್ತಿತ್ತು. ಆ ನಾಯಿ ಎರಡು ಮರಿಗಳನ್ನ ಹಾಕಿತು. ಹೋಟೆಲ್ಗೆ ಬಂದವರಾರೋ ನಾಯಿ ಮರಿಗಳನ್ನು ಕೊಂಡೊಯ್ದಿದ್ದರು. ನಾನು ಚನ್ನಗಿರಿಯ ಬೀದಿ ಬೀದಿ ಹುಡುಕಿದೆ. ಮರಿಗಳು ಸಿಗಲಿಲ್ಲ. ಆಗ ಬಹಳ ಬೇಸರವಾಯಿತು ಅನ್ನುತ್ತಾರೆ ಮೊಹಮದ್ ಅಯಾಜ್.

ಶಿವಮೊಗ್ಗಕ್ಕೆ ಹಿಂತಿರುಗಿದ ಮೊಹಮದ್ ಅಯಾಜ್, ಈಗ ಟೈಲ್ಸ್ ಕೆಲಸದ ಮೇಸ್ತ್ರಿಯಾಗಿದ್ದಾರೆ. ‘ಟೈಲ್ಸ್ ಕೆಲಸಕ್ಕೆ ಹೋಗುವಾಗ ಟೈಸನ್ ಅನ್ನು ಬೊಮ್ಮನಕಟ್ಟೆಯಲ್ಲಿರುವ ಕೆನಾಲ್’ನಲ್ಲಿ (ಶ್ವಾನಗಳ ಕೇರ್ ಸೆಂಟರ್) ಬಿಟ್ಟು ಹೋಗುತ್ತೇನೆ. ಸಂಜೆ ಬರುವಾಗ ಟೈಸನ್ ಅನ್ನು ಮನೆಗೆ ಕರೆದುಕೊಂಡು ಬರುತ್ತೇನೆ. ನಿನ್ನೆ ಟೈಸನ್ ಹುಟ್ಟುಹಬ್ಬದ ಹಿನ್ನೆಲೆ ಕೆಲಸಗಾರರಿಗೆ ರಜೆ ಕೊಟ್ಟಿದ್ದೆ. 150 ಜನ ಸ್ನೇಹಿತರಿಗೆ ಬಿರಿಯಾನಿ ಊಟ ಹಾಕಿಸಿದೆ. ಇವತ್ತು ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ’ ಎಂದು ತಿಳಿಸಿದರು.

‘ನಾಯಿ ಸಾಕುವುದು ಬರಿ ಪ್ರತಿಷ್ಠೆಯಾಗಬಾರದು. ಅದಕ್ಕೆ ಒಳ್ಳೆಯ ಆಹಾರ, ಔಷಧೋಪಚಾರ ಮಾಡಬೇಕು. ಪ್ರಾಣಿಗಳ ಬಗ್ಗೆ ಪ್ರೀತಿ ಇರಬೇಕು’ ಎಂದು ಶ್ವಾನ ಪ್ರಿಯರಿಗೆ ಮೊಹಮದ್ ಅಯಾಜ್ ಕಿವಿಮಾತು ಹೇಳುತ್ತಾರೆ. ಒಟ್ಟಾರೆ ಮೊಹಮದ್ ಅಯಾಜ್ ಅವರು ಶ್ವಾನದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿರುವುದು ಅವರ ಸ್ನೇಹಿತರ ವಲಯ, ಅಕ್ಕಪಕ್ಕದ ನಿವಾಸಿಗಳು, ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here