ಪೊಲೀಸ್ ಅಧಿಕಾರಿಗಳು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು: ನ್ಯಾ. ಮುಸ್ತಫಾ ಹುಸೇನ್

0
205

ಶಿವಮೊಗ್ಗ: ಮಕ್ಕಳು, ಯುವಜನತೆ ಸೇರಿದಂತೆ ಜನ ಸಮುದಾಯವನ್ನು ಮಾದಕ ದ್ರವ್ಯಗಳ ಬಳಕೆಯಿಂದ ದೂರವಿಡುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಕೋಟ್ಪಾ ಕಾಯ್ದೆ 2003 ಬಗ್ಗೆ ತಿಳಿದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಶಿವಮೊಗ್ಗ ಇವರ ಸಹಯೋಗದಲ್ಲಿ ನಗರದ ಐ.ಎಂ.ಎ ಸಭಾಂಗಣದಲ್ಲಿ ಇಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಾಯ್ದೆ, ಕಾನೂನು ಅನುಷ್ಟಾನಗೊಳಿಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ಪ್ರಮುಖವಾಗಿದೆ. ಕೋಟ್ಪಾ ಕಾಯ್ದೆ ಅತ್ಯಂತ ಸರಳವೂ ಆಗಿದ್ದು ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನಗಳ ಜಾಹಿರಾತು, ಪ್ರದರ್ಶನ ನಿಷೇಧ, ವಿದ್ಯಾಸಂಸ್ಥೆಗಳ 100 ಗಜದೊಳಗೆ ತಂಬಾಕು ಉತ್ಪನ್ನ ಬಳಕೆ, ಅಂಗಡಿ, ಪ್ರದರ್ಶನ ನಿಷೇಧ ಸೇರಿದಂತೆ ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕುವ ಹಾಗೂ ಸಮಾಜದಲ್ಲಿ ಒಂದು ಶಿಸ್ತು ರೂಪಿಸಿ ಸನ್ಮಾರ್ಗದಲ್ಲಿ ಯುವಜನತೆ ಸಾಗಲು ಅನುವಾಗುವಂತೆ ಜಾರಿಗೊಳಿಸಲಾಗಿದೆ.

ಕೋಟ್ಪಾ ಕಾಯ್ದೆ ಅರಿವು ಮತ್ತು ಅನುಷ್ಟಾನದಲ್ಲಿ ಕೊರತೆ ಕಾಣುತ್ತಿದೆ. ಅದು ಅನುಷ್ಟಾನಾಧಿಕಾರಿಗಳ ಇಚ್ಚಾಶಕ್ತಿ ಕೊರತೆ ಅಥವಾ ಬೇರೆ ಕಾರಣಗಳಿಂದ ಆಗಿರಬಹುದು. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನಿಗಳು, ಕೋಟ್ಪಾ ಕಾಯ್ದೆ ಉಲ್ಲಂಘಿಸುತ್ತಿರುವವರು ಕಂಡು ಬಂದಲ್ಲಿ ಪೊಲೀಸ್ ಅಧಿಕಾರಿಗಳು ಅವರ ವಿರುದ್ದ ಕ್ರಮ ವಹಿಸಬೇಕು. ಹಾಗೂ ಪರಿಣಾಮಕಾರಿ ಅನುಷ್ಟಾನಕ್ಕೆ ಸಂಬಂಧಿಸಿದ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಎನ್‍ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ & ಸೈಕೊಟ್ರೊಪಿಕ್ ಸಬ್‍ಸ್ಟನ್ಸಸ್ ಆಕ್ಟ್) ಪ್ರಕರಣಗಳು ಅತಿ ಹೆಚ್ಚಿವೆ. ಇಲ್ಲಿ ತಂಬಾಕು ಕೃಷಿ ಮತ್ತು ಸೇವನೆ ಎರಡೂ ಹೆಚ್ಚಿದ್ದು ಇದನ್ನು ನಿಯಂತ್ರಿಸುವ ಅನುಷ್ಟಾನಾಧಿಕಾರಿಗಳಾದ ಪೊಲೀಸರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಹಾಗೂ ಕೋಟ್ಪಾ ಕಾಯ್ದೆ ಮುಖ್ಯ ಉದ್ದೇಶಗಳಾದ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಹಾಗೂ ಕಾಯ್ದೆ ಉಲ್ಲಂಘನೆ ವಿರುದ್ದ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಈ ಕಾಯ್ದೆ ಸೇರಿದಂತೆ ಜನತೆಗೆ ಅಗತ್ಯವಿರುವ ಕಾನೂನುಗಳ ಬಗ್ಗೆ ಅರಿವು-ನೆರವು ನೀಡುವ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರಲಾಗಿದೆ. ಸಾರ್ವಜನಿಕರು ಕಾನೂನು ಸೇವಾ ಪ್ರಾಧಿಕಾರದ ಸೇವೆಯ ಸದುಪಯೋಗ ಪಡೆಯಬೇಕೆಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸೇವೆ ಸಮಾಜದಲ್ಲಿ ಅತ್ಯಗತ್ಯವಾಗಿದ್ದು, ಎಲ್ಲ ಇಲಾಖೆಗಳು, ಸಂಸ್ಥೆಗಳು ಸಹಕಾರದೊಂದಿಗೆ ಉತ್ತಮ ವ್ಯವಸ್ಥೆಗಾಗಿ ಕಾರ್ಯ ನಿರ್ವಹಿಸಬೇಕು. ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರವು ಹಿಂದುಳಿದವರು, ಮಹಿಳೆಯರು, ಬಡವರು, ಅಲೆಮಾರಿ, ಅರಣ್ಯ ಜನಾಂಗ ಹೀಗೆ ಇತರೆ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಉಚಿತವಾಗಿ ಕಾನೂನು ಅರಿವು ಮತ್ತು ನೆರವನ್ನು ನೀಡುತ್ತಿದೆ. ಹಳ್ಳಿ ಹಳ್ಳಿಗಳು, ಶಾಲೆಗಳಿಗೆ ತೆರಳಿ ಉಚಿತ ಕಾನೂನು ಅರಿವು ಮೂಡಿಸಲಾಗುತ್ತಿದೆ. ಆದರೆ ನಮ್ಮ ಜನ ಮನರಂಜನೆ ಕಾರ್ಯಕ್ರಮಕ್ಕೆ ಸೇರಿದಂತೆ ಇಂತಹ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಇದಾಗಬಾರದು. ಜನಸಾಮಾನ್ಯರಿಗೆ ಅಗತ್ಯವಾದ ಎಲ್ಲ ರೀತಿಯ ಕಾನೂನುಗಳನ್ನು ತಿಳಿದು ನೆಮ್ಮದಿ ಜೀವನ ನಡೆಸಲು ಮುಂದೆ ಬರಬೇಕೆಂದರು.

ಜಿಲ್ಲೆಯಲ್ಲಿ ಗಾಂಜಾ ಸೇವನೆ ಅತಿ ಹೆಚ್ಚಿದೆ. ಆದರೆ ಈ ಸೇವನೆ ಕುರಿತು ದಾಖಲೆಗಳಿಲ್ಲದ ಕಾರಣ ಪ್ರಕರಣ ದಾಖಲಿಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ ಗಾಂಜಾ ಸೇವನೆ ಪತ್ತೆ ಹಚ್ಚಲು ಕಿಟ್‍ಗಳ ಮೂಲಕ ಪರೀಕ್ಷೆ ಮಾಡುವ ಪ್ರಯೋಗ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೂ ಈ ಗಾಂಜಾ ಸೇವನೆ ಪತ್ತೆ ಹಚ್ಚುವ ಕಿಟ್‍ಗಳನ್ನು ಉಪಯೋಗಿಸಿ ಗಾಂಜಾ ಪ್ರಕರಣಗಳನ್ನು ದಾಖಲಿಸಿ, ಗಾಂಜಾ ಸೇವನೆಗೆ ಕಡಿವಾಣಕ್ಕೆ ಕ್ರಮ ವಹಿಸಲಾಗುವುದು.

– ಡಾ.ರಾಜೇಶ್ ಸುರಗೀಹಳ್ಳಿ, ಡಿಹೆಚ್‍ಓ

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಪಾಲ್ಗೊಂಡಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಪ್ರಾರ್ಥಿಸಿದರು. ಎನ್‍ಟಿಸಿಪಿ ಸಾಮಾಜಿಕ ಕಾರ್ಯಕರ್ತ ರವಿರಾಜ್ ನಿರೂಪಿಸಿದರು. ಎನ್.ಟಿ.ಪಿ.ಸಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಪ್ಪ.ಓ, ಎನ್‍ಟಿಸಿಪಿ ಜಿಲ್ಲಾ ಸಲಹೆಗಾರ ಹೇಮಂತರಾಜ್ ಅರಸ್, ಐಪಿಹೆಚ್ ಯೋಜನಾಧಿಕಾರಿ ಅಚ್ಯುತ ಎನ್.ಜಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ತಂಬಾಕು ಬಳಕೆ ದುಷ್ಪರಿಣಾಮಗಳು ಮತ್ತು ಕೋಟ್ಪಾ ಕಾಯ್ದೆ 2003 ಕುರಿತು ಮಾಹಿತಿ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here