ಪೊಲೀಸ್ ಇಲಾಖೆಯ ಉತ್ತಮ ಕಾರ್ಯವೈಖರಿಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

0
499

ಚಿಕ್ಕಮಗಳೂರು: ಪೊಲೀಸ್ ಇಲಾಖೆಯ ಉತ್ತಮ ಕಾರ್ಯ ವೈಖರಿಯಿಂದ ಸಾರ್ವಜನಿಕರು ತಮ್ಮ ದೂರುಗಳನ್ನು ಪೊಲೀಸ್ ಇಲಾಖೆಯ ಮೂಲಕ ಇತ್ಯರ್ಥಪಡಿಸಿಕೊಂಡು ಸಮಾಜದ ಬದಲಾವಣೆಗೆ ಮುಂದಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ನಗರದ ರಾಮನಹಳ್ಳಿ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 1965 ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಅದರ ಅಂಗವಾಗಿ ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ, ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಸಹಕಾರಿಯಾಗಲಿದೆ.

ಹಿಂದಿನ ಕಾಲದಲ್ಲಿ ಜನರು ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಬರಲು ಭಯ ಪಟ್ಟು ತಮ್ಮ ವ್ಯಾಜ್ಯಗಳನ್ನು ಪಂಚಾಯಿತಿ ಮಟ್ಟದಲ್ಲಿಯೆ ಇತ್ಯರ್ಥಪಡಿಸಿಕೊಳ್ಳುತ್ತಿದ್ದರು, ಆದರೆ ಇಂದು ಪೊಲೀಸ್ ಇಲಾಖೆಯ ಉತ್ತಮ ಕಾರ್ಯದಿಂದಾಗಿ ಜನಸಮಾನ್ಯರು ತಮ್ಮ ಪ್ರತಿಯೊಂದು ಸಣ್ಣ ವಿಚಾರಗಳ ದೂರುಗಳನ್ನು ಠಾಣೆಗೆ ಬಂದು ಬಗೆಹರಿಸಿಕೊಳ್ಳುವ ಮೂಲಕ ಇಲಾಖೆಯೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದುವ ಮೂಲಕ ಅವರ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸಿದಲ್ಲಿ ಉತ್ತಮ ಕಾರ್ಯನಿರ್ವಹಿಸುವುದರೊಂದಿಗೆ ಯಶಸ್ಸು ಕಾಣಬಹುದು ಎಂದು ಹೇಳಿದರು.

ನಿವೃತ್ತ ಪೊಲೀಸ್ ನಿರೀಕ್ಷಕ ಕೆ.ಪ್ರಭಾಕರ್ ಮಾತನಾಡಿ, ಸಾರ್ವಜನಿಕರೊಂದಿಗೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವ ಮೂಲಕ ಕೆಲಸ ಕಾರ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಪ್ರತಿಯೊಬ್ಬರು ಯಶಸ್ವಿಯಾಗಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವ ಮೂಲಕ ನಿವೃತ್ತಿ ಹೊಂದಬಹುದು.

ಪೊಲೀಸ್ ಧ್ವಜ ದಿನಾಚರಣೆಯಂದು ಪೊಲೀಸ್ ಧ್ವಜದ ಗುರುತಿನ ಚೀಟಿಯನ್ನು ಮಾರಾಟ ಮಾಡುವ ಮೂಲಕ ಅದರಿಂದ ಸಂಗ್ರಹವಾಗುವ ಹಣವನ್ನು ಪೊಲೀಸರ ಕಲ್ಯಾಣ ನಿಧಿಗೆ ಅರ್ಪಿಸಿ ಪೊಲೀಸರ ಶ್ರೆಯೋಭಿವೃದ್ಧಿಗೆ ಶ್ರಮಿಸುವ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ.

ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ದಿನನಿತ್ಯದ ಕೆಲಸದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಇಂತಹ ಸಂದರ್ಭದಲ್ಲಿ ಮಾಡುವ ಸಣ್ಣ ತಪ್ಪುಗಳಿಂದಾಗಿ ಇಲಾಖೆ ತೊಂದರೆಯನ್ನು ಎದುರಿಸಬೇಕಾಗುತ್ತದೆ ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣ ಅವುಗಳನ್ನು ದಾಖಲಿಸಿಕೊಂಡು ತ್ವರಿತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆಗೆ ದೂರು ನೀಡಲು ಬರುವ ಜನಸಮಾನ್ಯರು ನೊಂದು ಬಂದಿರುವವರಾಗಿರುತ್ತಾರೆ ಅಂತಹವರ ದೂರುಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಹಾಗೂ ಠಾಣೆಗೆ ಬಂದ ಮಹಿಳೆಯರು, ಮಕ್ಕಳೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸಿ ಅವರ ದೂರುಗಳಿಗೆ ಸ್ಪಂದಿಸಬೇಕು ಎಂದರು.

ಸರ್ಕಾರವು ನಮಗೆ ಸಂಬಳದ ಜೊತೆಗೆ ಹಲವಾರು ಸವಲತ್ತುಗಳನ್ನು ನೀಡುತ್ತಿದೆ ಅದರನ್ವಯ ನಾವು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯ ಘನತೆ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ಕರ್ನಾಟಕ ಪೊಲೀಸ್ ಇಲಾಖೆಯನ್ನು ದೇಶದಲ್ಲಿ ಮೊದಲ ಸ್ಥಾನಕ್ಕೆ ತರುವಂತಹ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕೋವಿಡ್-19 ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸಿದ್ದು, ರಾಜ್ಯದ್ಯಾಂತ ಇತ್ತೀಚೆಗೆ ಕೋರೊನ ಎರಡನೇ ಅಲೆ ಪ್ರಾರಂಭವಾಗಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸೇವೆಯು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಪೂವಿತಾ ಮಾತನಾಡಿ, ಪೊಲೀಸ್ ದಿನಾಚರಣೆಯನ್ನು ಪೊಲೀಸರ ಕಲ್ಯಾಣಕೋಸ್ಕರ ಆಚರಿಸುತ್ತಿದ್ದೇವೆ, ಪೊಲೀಸ್ ಇಲಾಖೆ ಅಧಿಕಾರಿಗಳು ತುರ್ತುಪರಿಸ್ಥಿತಿ, ಸಭೆ ಸಮಾರಂಭಗಳು ಮುಂತಾದ ಹಬ್ಬದ ದಿನಗಳಲ್ಲಿ ತಮ್ಮ ಕುಟುಂಬದವರ ಜೊತೆಯಲ್ಲಿರದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಸಮಾಜಕ್ಕೆ ಅವರ ಪಾತ್ರ ಮುಖ್ಯವಾಗಿದೆ.

ಸಮಾಜದಲ್ಲಿ ಪೊಲೀಸರ ಸೇವೆ ಮಹತ್ವವಾಗಿದ್ದು ಇದೆ ರೀತಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿನ ಜನಸಮಾನ್ಯರ ಸಮಸ್ಯೆಗಳಿಗೆ ಸಮನ್ವಯತೆಯಿಂದ ಸ್ಪಂಧಿಸಿ ಉತ್ತಮ ಕೆಲಸಗಳನ್ನು ನಿರ್ವಹಿಸುವ ಮೂಲಕ ಇಲಾಖೆಯ ಘನತೆಯನ್ನು ಕಾಪಾಡಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್.ಎಂ.ಹೆಚ್ ಪೊಲೀಸ್ ಇಲಾಖೆಯ ವಾರ್ಷಿಕ ವರಧಿ ಹಾಗೂ 2020-21 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಓದಿದರು.

ಕವಾಯತ್‌ನಲ್ಲಿ ಆರು ಪೊಲೀಸ್ ತುಕಡಿಗಳು ಪಾಲ್ಗೊಂಡಿದ್ದವು, ಹಾಗೂ ಈ ಸಂದರ್ಭದಲ್ಲಿ ಸಮಾಜದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ಸಾರ್ವಜನಿಕರಿಗೆ ಸನ್ಮಾನಿಸಲಾಯಿತು ಮತ್ತು ಪೊಲೀಸ್ ದ್ವಜ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು.

ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೋಲಿಸ್ ಕುಟುಂಬ ವರ್ಗದವರು ಪ್ರಶಿಕ್ಷಣಾರ್ತಿಗಳು ಹಾಗೂ ಸಾರ್ವಜನಿಕ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here