ಶಿವಮೊಗ್ಗ: ಎಸ್ಐಟಿ ಒಂದು ಸ್ವತಂತ್ರ ಸಂಸ್ಥೆ. ಎಸ್ಐಟಿ ಬಗ್ಗೆ ಬೆಳಗ್ಗೆ, ಸಂಜೆ ಮಾತನಾಡಬಾರದು. ಎಸ್ಐಟಿ ನಿಷ್ಪಕ್ಷಪಾತವಾಗಿ, ಕಾನೂನು ಪ್ರಕಾರ ಕೆಲಸ ಮಾಡುತ್ತದೆ. ಏನು ಕೆಲಸ ಮಾಡ್ತಾರೆ, ಯಾವಾಗ ಕೆಲಸ ಮುಗಿಯುತ್ತೆ ಅದರ ನಂತರ ನಾವು ಚರ್ಚೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನ ಎಸ್ಐಟಿ ತನಿಖೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರತಿದಿನ ಈ ರೀತಿ ಮಾಡಬೇಕು, ಈ ರೀತಿ ಮಾಡಬಾರದು ಅಂತಾ ಹೇಳೋದು ಸೂಕ್ತ ಅಲ್ಲ. ಎಸ್ಐಟಿ ರಚನೆ ಮಾಡುವ ಉದ್ದೇಶ ಇದೇ ಇರುತ್ತೆ. ಅವರು ಸ್ವತಂತ್ರವಾಗಿ ಕೆಲಸ ಮಾಡ್ತಾರೆ. ಕೋರ್ಟ್ಗೆ ಮಾಹಿತಿ ನೀಡ್ತಾರೆ. ಹೈಕೋರ್ಟ್ ಅವರು ಈಗಾಗಲೇ ಎಸ್ ಐಟಿ ಅವರನ್ನು ವರದಿ ಕೇಳಿದೆ. ಕೋರ್ಟ್ಗೆ ಅವರು ಮಾಹಿತಿ ಕೊಡ್ತಾರೆ.