ಪ್ರತಿಯೊಬ್ಬರು ಗರ್ಭಪಾತ ನಿಷೇಧ ಕಾಯ್ದೆಯ ಮೂಲ ಉದ್ದೇಶವನ್ನು ಅರಿತು ಪಾಲಿಸಬೇಕು: ಬಿ.ಜಯಂತ ಕುಮಾರ್

0
372

ಶಿವಮೊಗ್ಗ : ಗರ್ಭ ಪೂರ್ವ ಮತ್ತು ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ-1994ರ ಮೂಲ ಉದ್ದೇಶವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಯ್ದೆಯ ನಿಯಮಗಳನ್ನು ಉತ್ತಮ ಉದ್ದೇಶಗಳಿಗಾಗಿ ಬಳಸಿಕೊಳ್ಳಬೇಕು ಎಂದು ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ ಕುಮಾರ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ – 1994 ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಇವರು ಕಾಯ್ದೆಯ ಮುಖ್ಯ ಉದ್ದೇಶವನ್ನು ಅರಿತು ಹೆಣ್ಣು ಗಂಡಿನ ಲಿಂಗಾನುಪಾತವನ್ನು ಸರಿದೂಗಿಸಲು ಸಹಕರಿಸಬೇಕು. ಹೆಣ್ಣನ್ನು ಸಮಾಜದ ಹೊರೆ ಎಂದು ಭಾವಿಸಲಾಗುತ್ತದೆ, ಆದರೆ ಹೆಣ್ಣು ಸಮಾಜದ ಹೊರೆಯಲ್ಲ, ಸಾಮಾಜದ ಶಕ್ತಿಯೇ ಹೆಣ್ಣು. ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿಯೂ ಮೇಲುಗೈ ಸಾಧಿಸಿದ್ದಾಳೆ. ಹೆಣ್ಣನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೆಣ್ಣನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧ ಅವರು, ಹೆಣ್ಣು ಎಲ್ಲಾ ಸ್ಥರಗಳಲ್ಲಿಯೂ ಎದ್ದು ನಿಲ್ಲುತ್ತಿದ್ದಾಳೆ. ಅವಳಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು. ಭ್ರೂಣ ಹತ್ಯೆ ಎಂಬ ಪಿಡುಗನ್ನು ಸಮಾಜದಿಂದ ತೊಡೆದು ಹಾಕಬೇಕು. ಇದಕ್ಕೆ ಕಡಿವಾಣ ಹಾಕುವುದು ಅಧಿಕಾರಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಕಾಯ್ದೆಯ ಮೂಲ ಉದ್ದೇಶವನ್ನು ಅರಿತು ಕಾನೂನುಗಳನ್ನು ಬಿಗಿಗೊಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈಶಾಲಿ ಎಂ.ಎನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರಾದ ವೀಣಾ ಭಟ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಪರಮೇಶ್ವರ ಶಿಗ್ಗಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಂಜುನಾಥ ನಾಗಲೀಕರ್ ಸೇರಿದಂತೆ ಆಶಾ ಕಾರ್ಯಕರ್ತರು, ವಿವಿಧ ಆಸ್ಪತ್ರೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here