ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸುವ ಅನಿವಾರ್ಯತೆ ಎದುರಾಗಬಹುದು: ಡಾ. ಹೆಚ್.ಎಲ್. ನಾಗರಾಜ

0
1405

ಚಿಕ್ಕಮಗಳೂರು: ಪ್ರವಾಸಿಗರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಪ್ರಕೃತಿಗೆ ವಿರುದ್ದವಾಗಿ ನಡೆದುಕೊಂಡಲ್ಲಿ ಪ್ರವಾಸಿಗರ ಭೇಟಿಗೆ ನಿಬಂಧ ವಿಧಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ ತಿಳಿಸಿದರು.

ಜಿಲ್ಲಾಡಳಿತ ನಗರಸಭೆ, ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮಾಣಿಕ್ಯಧರದ ಗಿರಿಶ್ರೇಣಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಚಿಕ್ಕಮಗಳೂರು ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಜಿಲ್ಲೆಯಾಗಿದ್ದು ಹಲವಾರು ಪ್ರವಾಸಿ ತಾಣಗಳು ಹಾಗೂ ಅತ್ಯದ್ಭುತವಾದ ಗಿರಿ ಶ್ರೇಣಿಗಳನ್ನು ಒಳಗೊಂಡಿದೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಿಂದ ಕಸದ ತೊಟ್ಟಿಯಾಗಿದೆ, ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕೆಲವೊಂದು ಮೌಢ್ಯಕ್ಕೆ ಒಳಗಾಗಿ ಬಳಸಿದ ಬಟ್ಟೆ, ಪ್ಲಾಸ್ಟಿಕ್ ಮತ್ತಿತ್ತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ, ಇದರಿಂದಾಗಿ ಪರಿಸರ ಹಾನಿಯಾಗುವುದಲ್ಲದೇ, ವನ್ಯಜೀವಿಗಳಿಗೂ ಕುತ್ತು ತರಲಿದೆ. ಪ್ರವಾಸಿಗರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಪರಿಸರನ್ನು ಸಂರಕ್ಷಣೆ ಮಾಡುವಂತೆ ವಿನಂತಿಸಿಕೊಂಡರು.

ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಿ ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಿ ಪರಿಸರದ ಬಗ್ಗೆ ತೀವ್ರ ನಿಗಾವಹಿಸಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗುವುದು ಎಂದರು.

ಸ್ಥಳೀಯ ಪಂಚಾಯಿತಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿ ತಾಣಗಳನ್ನು ತ್ಯಾಜ್ಯಗಳ ಮೂಲಕ ಹಾಳು ಗಡವಿದ್ದಲ್ಲಿ ದಂಡದೊಂದಿಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಗಿರಿಶ್ರೇಣಿ ಭಾಗದಲ್ಲಿ ಈ ಹಿಂದೆ ಸ್ವಚ್ಚತಾ ಅಭಿಯಾನ ಕೈಗೊಳ್ಳುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿತ್ತು ಆದಾಗ್ಯೂ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಅಸಡ್ಡೆ ತೋರುವ ಮೂಲಕ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆದು ಪರಿಸರವನ್ನು ಹಾಳುಮಾಡುತ್ತಿದ್ದಾರೆ ಆ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಪಂಚಾಯಿತಿ ತೀವ್ರತರವಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಗಿರಿ ಶ್ರೇಣಿಯ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುತ್ತಿದ್ದು, ಪ್ರವಾಸಿಗರು ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಡಿಕೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕರು, ಪ್ರವಾಸಿಗರು ಪ್ರಕೃತಿಯೊಡನೆ ಆಟವಾಡದೆ ಅದನ್ನು ಉಳಿಸಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಚಿಸಿ, ಕೆಲಸವಾಗಬೇಕಿದೆ, ಶುಚಿತ್ವಕ್ಕೆ ಹೆಚ್ಚು ಆದ್ಯತೇ ನೀಡಬೇಕು. ನಿಯಮಗಳನ್ನು ಉಲ್ಲಂಘಿಸಿ ಪರಿಸರ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಕಾಂತರಾಜ್, ಹಾಗೂ ನಗರಸಭೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here